ADVERTISEMENT

ಕೊಪ್ಪಳ: ಕಪ್ಪು ಬಾವುಟ ಪ್ರದರ್ಶನ: 9 ಜನ ಬಂಧನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 18:23 IST
Last Updated 1 ಆಗಸ್ಟ್ 2022, 18:23 IST
   

ಕೊಪ್ಪಳ: ನಗರಕ್ಕೆ ಸೋಮವಾರ ಮುಖ್ಯಮಂತ್ರಿ ಭೇಟಿ ನೀಡಿದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಒಂಬತ್ತು ಜನ ಕಾರ್ಯಕರ್ತರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಎಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಅಂಜನಾದ್ರಿಯ ಕಾರ್ಯಕ್ರಮ ಮುಗಿಸಿಕೊಂಡು ಸಿ.ಎಂ ಬಸವರಾಜ ಬೊಮ್ಮಾಯಿ ಇಲ್ಲಿಗೆ ಸಮೀಪದ ಎಂಎಸ್‌ಪಿಎಲ್‌ ವಿಮಾನ ನಿಲ್ದಾಣದಿಂದನಿಂದ ರಸ್ತೆ ಮಾರ್ಗದ ಮೂಲಕ ತಾಲ್ಲೂಕು ಕ್ರೀಡಾಂಗಣಕ್ಕೆ ಬಂದರು. ಈ ಮಾರ್ಗದ ಬಸವೇಶ್ವರ ವೃತ್ತದ ಸಮೀಪದಲ್ಲಿ ಕೆಲ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿದ್ದರು.

ವಿದ್ಯಾರ್ಥಿಗಳಾದ ಗಂಗಾವತಿಯ ಚಾಂದ್‌ ಸಲ್ಮಾನ್‌, ಖಾದರಬಾಷಾ, ಅಲ್ತಾಫ್‌ ಹುಸೇನ್‌, ಆಸೀಫ್‌, ಅಸ್ಪಕ್‌ ಗೌಸ್‌, ಕೊಪ್ಪಳದ ಅತೀಕ್‌, ಸಮೀರ ಶಕೀರ್‌, ಫೈಸರ್‌, ಸಾಯಿ ಅವರನ್ನು ಬಂಧಿಸಲಾಗಿದೆ. ಸಿಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಬೆಳ್ತಂಗಡಿಯ ಅತಾವುಲ್ಲಾ ವಿರುದ್ಧ ಘಟನೆಗೆ ಪ್ರಚೋದನೆ ನೀಡಿದ ಆರೋಪದ ಕುರಿತು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಕಪ್ಪು ಬಾವುಟ ಪ್ರದರ್ಶಿಸಿದ 9 ಜನ ಮತ್ತು ಕುಮ್ಮಕ್ಕು ನೀಡಿದ ಒಬ್ಬ ಕಾರ್ಯಕರ್ತ ಸೇರಿದಂತೆ ಒಟ್ಟು 10 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ತಿಳಿಸಿದರು.

‘ಬಿಜೆಪಿ ದ್ವೇಷದ ರಾಜಕಾರಣದಲ್ಲಿ ಒಂದು ವರ್ಷ ಪೂರೈಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ವಿಷಯದಲ್ಲಿ ಪರಿಹಾರ ಒದಗಿಸುವಲ್ಲಿ ತಾರತಮ್ಯ ಎಸಗಿದೆ’ ಎಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.