ಕೊಪ್ಪಳ: ಪುರಾಣದ ಐತಿಹ್ಯ ಹೊಂದಿರುವ ಇಲ್ಲಿನ ಮಳೆಮಲ್ಲೇಶ್ವರ ಬೆಟ್ಟದಲ್ಲಿ (ಇಂದ್ರಕೀಲ ಪರ್ವತ) ಭಾನುವಾರ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ರಥೋತ್ಸವ ನಡೆಯಿತು.
ಜಾತ್ರೆಯ ಅಂಗವಾಗಿ ಬೆಳಗಿನ ಜಾವದಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ತಂಡೋಪತಂಡವಾಗಿ ಬೆಟ್ಟದಲ್ಲಿರುವ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮಗಳು, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 5.30ಕ್ಕೆ ನಡೆದ ಎರಡು ಗಾಲಿಯ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು. ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಬೆಟ್ಟದ ಮೇಲಿರುವ ದೇವಸ್ಥಾನ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ವಾರದ ರಜಾ ದಿನವಾಗಿದ್ದರಿಂದ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
ರಥೋತ್ಸವದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ‘ಬದುಕಿನಲ್ಲಿ ಸಾಧನೆ ಮಾಡುವ ಆಸೆ ಇದ್ದವರು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದರು.
‘ಮನುಷ್ಯ ಭೂಮಿಗೆ ಬಂದ ಮೇಲೆ ಹಿಮಾಲಯ, ಸಹ್ಯಾದ್ರಿ ಪರ್ವತ ನಿರ್ಮಾಣ ಮಾಡಬೇಕಿಲ್ಲ. ದೇವರು ಮಾಡಿಟ್ಟ ಈ ಎಲ್ಲ ಪ್ರಕೃತಿಯನ್ನು ಹಾಳು ಮಾಡದೆ ಬದುಕಿದರೆ ಅಷ್ಟೇ ಸಾಕು. ದೇವರು ಮನುಷ್ಯನಿಗೆ ದೇಹ, ಮನಸ್ಸು, ಅಂಗಾಂಗ ಎಲ್ಲವನ್ನೂ ಕೊಟ್ಟಿದ್ದಾನೆ. ಅದನ್ನೆಲ್ಲ ಹಾಳುಮಾಡಿಕೊಳ್ಳದೆ ಆರೋಗ್ಯಪೂರ್ಣವಾಗಿ ಬದುಕಿದರೆ ಅದೇ ಸಾರ್ಥಕ ಬದುಕು’ ಎಂದು ಹೇಳಿದರು.
‘ಅನ್ನ ಮಾಡುವಾಗ ಅಕ್ಕಿಯಲ್ಲಿ ಹರಳು ಬರುತ್ತವೆ. ಅದನ್ನು ತೆಗೆದು ಅನ್ನ ಮಾಡುವಂತೆ ಜೀವನದಲ್ಲಿ ಕೆಟ್ಟದನ್ನು ತೆಗೆದು ಹಾಕಿ ಒಳ್ಳೆಯ ಹಾದಿಯಲ್ಲಿ ಸಾಗಬೇಕು. ಜೀವನದಲ್ಲಿ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೂ ಕೆಟ್ಟದನ್ನಂತೂ ಮಾಡಬಾರದು’ ಎಂದು ಸಲಹೆ ನೀಡಿದರು.
ಮೈನಹಳ್ಳಿ ಬಿಕನಹಳ್ಳಿಯ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ, ಹೂವಿನಹಡಗಲಿಯ ಶಾಖಾ ಹಿರೇಮಠದ ಹಿರಿಶಾಂತವೀರ ಸ್ವಾಮೀಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.