ADVERTISEMENT

ಕೊಪ್ಪಳ: ನೀರಿನ ಟ್ಯಾಂಕ್‌ ಹತ್ತಿ ಜಿಗಿಯುವ ಬೆದರಿಕೆಯೊಡ್ಡಿದ ಯುವಕ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:56 IST
Last Updated 29 ಜೂನ್ 2024, 15:56 IST
   

ಕೊಪ್ಪಳ: ಇಲ್ಲಿನ ಗವಿಮಠದ ಮುಂಭಾಗದಲ್ಲಿ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಏರಿದ್ದ ಯುವಕನೊಬ್ಬ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ಶನಿವಾರ ನಡೆದಿದೆ.

ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ಪ್ರಕಾಶ ಎಂಬಾತ ಟ್ಯಾಂಕ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಪೊಲೀಸರು ನಿನ್ನ ಸಮಸ್ಯೆ ಏನೇ ಇದ್ದರೂ ಪರಿಹರಿಸೋಣ, ಮೊದಲು ಸುರಕ್ಷಿತವಾಗಿ ಕೆಳಗಡೆ ಬಾ ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಸಿಪಿಐ ಜಯಪ್ರಕಾಶ್ ಸೇರಿದಂತೆ ಹಲವರು ‍‘ನಿನಗೆ ಅನ್ಯಾಯವಾಗಿದ್ದರೆ ದೂರು ನೀಡು ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರೂ ಕೇಳಲಿಲ್ಲ.

ತಾನಿರುವ ಸ್ಥಳಕ್ಕೆ ಬಂದರೆ ಮಾಧ್ಯಮದವರ ಜೊತೆ ಮಾತನಾಡುವುದಾಗಿ ಪ್ರಕಾಶ ಹೇಳಿದ್ದರಿಂದ ಖಾಸಗಿ ವಾಹಿನಿಯ ವರದಿಗಾರ ಹಾಗೂ ಕ್ಯಾಮೆರಾಮನ್‌ ಕಬ್ಬಿಣದ ಮೆಟ್ಟಿಲು ಏರಿ ಮೇಲಕ್ಕೆ ಹೋಗಿ ಯುವಕನ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಪ್ರಕಾಶ ಅವರ ಹಿಡಿತ ತಪ್ಪಿಸಿ ಕೆಳಗಡೆ ಜಿಗಿದಿದ್ದಾನೆ. ಟ್ಯಾಂಕ್ ಕೆಳಗಡೆ ಇದ್ದ ಮರದ ಮೇಲೆ ಬಿದ್ದಿದ್ದರಿಂದ ಬೆನ್ನು ಸೇರಿದಂತೆ ಹಲವು ಕಡೆ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

‘ವೈದ್ಯರೊಬ್ಬರಿಂದ ನನಗೆ ಅನ್ಯಾಯವಾಗಿದೆ, ಪ್ರೀತಿ ವಿಷಯದಲ್ಲಿ ಮೋಸವಾಗಿದೆ ಎಂದು ಹೀಗೆ ಬೇರೆ ಕಾರಣಗಳನ್ನು ಯುವಕ ನೀಡುತ್ತಿದ್ದಾನೆ. ಆತ ಮಾನಸಿಕ ಅಸ್ವಸ್ಥ ಇರಬಹುದು ಎನ್ನುವ ಸಂದೇಹವಿದ್ದು ಈ ಕುರಿತೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಈ ಕುರಿತು ಪ್ರತಿಕ್ರಿಯಿಸಿ ’ಯುವಕನ ಕುಟುಂಬದವರಿಂದ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.