ಕುಷ್ಟಗಿ: ಪದವಿ ಪರೀಕ್ಷೆಗೆ ಸಂಬಂಧಿಸಿದಂತೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 2022-23ನೇ ವರ್ಷದ ನಡೆದ ಮೊದಲ ಸೆಮಿಸ್ಟರ್ ಫಲಿತಾಂಶ ನೀಡದೆ ಸತಾಯಿಸುತ್ತಿರುವುದರಿಂದ ಪರೀಕ್ಷೆ ಬರೆದ ನೂರಾರು ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಕಾಲೇಜು ಸೇರಿದಂತೆ ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 60 ಪದವಿ ಕಾಲೇಜುಗಳಿವೆ. ಕುಷ್ಟಗಿ ಪದವಿ ಕಾಲೇಜು ಒಂದರಲ್ಲೇ ಪರೀಕ್ಷೆ ಬರೆದ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ಫಲಿತಾಂಶ ಬಂದಿರಲಿಲ್ಲ. ಸದ್ಯ ಇನ್ನೂ 15-20 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳ್ಳದಿರುವುದು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ.
ಮೊದಲ ಸೆಮಿಸ್ಟರ್ ಹೊರತುಪಡಿಸಿ ಉಳಿದ ಫಲಿತಾಂಶ ಪ್ರಕಟವಾಗಿದೆ. ಸದ್ಯ 6ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು ಈವರೆಗೂ ಮೊದಲ ಸೆಮಿಸ್ಟರ್ ಫಲಿತಾಂಶ ಬಂದಿಲ್ಲ. ಪರೀಕ್ಷೆ ಮುಗಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಬೇಕಾದರೆ ಎಲ್ಲ ಸೆಮಿಸ್ಟರ್ ಫಲಿತಾಂಶ ಬಂದಿರಬೇಕು. ಎರಡು ವರ್ಷಗಳಾದರೂ ಫಲಿತಾಂಶ ನೀಡದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಕೆಲ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ಎಲ್ಲಿಂದ ಸಮಸ್ಯೆ: ರಾಷ್ಟ್ರೀಯ ಶೈಕ್ಷಣಿಕ ನೀತಿ (ಎನ್‌ಇಪಿ) ಪಠ್ಯಕ್ರಮ ಜಾರಿಗೆ ಬಂದನಂತರ ಈ ಸಮಸ್ಯೆ ಉದ್ಭವಿಸಿದೆ. ಎಲ್ಲ ವ್ಯವಸ್ಥೆ ಆನ್‌ಲೈನ್ ಮೂಲಕ ನಡೆಯುತ್ತಿದ್ದು ಪರೀಕ್ಷೆ ಬರೆದರೂ ಕೆಲ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗೈರು ಹಾಜರಿ ಎಂದು ಬಂದಿದೆ. ಅಲ್ಲದೇ ಮೊದಲ ಸೆಮಿಸ್ಟರ್ ಫಲಿತಾಂಶವೂ ಪ್ರಕಟವಾಗಿಲ್ಲ. ಈ ಎಲ್ಲ ಕಾರಣಗಳಿಂದ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಭಯ ಆವರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ವಿ.ಡಾಣಿ, ‘ಫಲಿತಾಂಶದಲ್ಲಿ ಸಮಸ್ಯೆಯಾಗಿದ್ದು ನಿಜ, ಈಗಾಗಲೇ ಬಹುತೇಕ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಇನ್ನೂ 15-20 ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ಫಲಿತಾಂಶ ಬರಬೇಕಿದೆ. ಈ ಬಗ್ಗೆ ವಿಶ್ವವಿದ್ಯಾಲಯದೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಖುದ್ದಾಗಿಯೂ ರಿಜಿಸ್ಟ್ರಾರ್ ಅವರಿಗೂ ಫಲಿತಾಂಶಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಗಿದೆ. ನಿರಂತರ ಸಂಪರ್ಕ ಮುಂದುವರಿದಿದ್ದು ಹಂತ ಹಂತವಾಗಿ ಎಲ್ಲ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಹೇಳಿದರು.
ಸ್ವಾಯತ್ತತೆ ಇಲ್ಲ: ಈ ಹಿಂದೆ ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆ ಇತ್ತು. ಯಾವುದೇ ತಾಂತ್ರಿಕ ಸಮಸ್ಯೆ ವಿವಿ ಹಂತದಲ್ಲೇ ಇತ್ಯರ್ಥಗೊಳ್ಳುತ್ತಿತ್ತು. ಆದರೆ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಜಾರಿಗೆ ಬಂದ ನಂತರ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ ಇದೇ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲಿರುವ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಈ ಹೊಸ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ವಿವಿಗಳಿಗೆ ಯಾವುದೇ ರೀತಿಯ ತಿದ್ದುಪಡಿಗೂ ಅವಕಾಶವಿಲ್ಲದ ಕಾರಣ ಎಲ್ಲದಕ್ಕೂ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯನ್ನೇ ಸಂಪರ್ಕಿಸಬೇಕು. ವಿಶ್ವವಿದ್ಯಾಲಯಗಳಿಗಿದ್ದ ಸ್ವಾಯತ್ತತೆ ಕಿತ್ತುಕೊಂಡ ನಂತರ ಇಂಥ ಅನೇಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಮೂಲಗಳು ‘ಪ್ರಜಾವಾಣಿ’ಗೆ ಸಮಸ್ಯೆ ವಿವರಿಸಿದವು.
ವಿಶ್ವವಿದ್ಯಾಲಯಗಳಲ್ಲಿ ಸ್ಪಷ್ಟತೆಯೇ ಇಲ್ಲ. ಕೊಪ್ಪಳ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದ್ದರೂ ಕೇವಲ ಪರೀಕ್ಷೆ ನಡೆಸಲು ಮಾತ್ರ ಸಾಧ್ಯವಾಗಿದೆ. ಈಗಲೂ ಬಳ್ಳಾರಿ ವಿವಿ ಪಠ್ಯಕ್ರಮವನ್ನೇ ಅನುಸರಿಸಲಾಗುತ್ತಿದೆ. ಎನ್‌ಇಪಿ ವ್ಯವಸ್ಥೆ ಜಾರಿಗೆ ಬಂದ ನಂತರ ವಿಶ್ವವಿದ್ಯಾಲಯಗಳಲ್ಲಿನ ವ್ಯವಸ್ಥೆ ಹಳ್ಳ ಹಿಡಿದಿದೆ. ತಂತ್ರಜ್ಞಾನದಲ್ಲಿ ಅಪ್‌ಡೇಟ್ ಆಗಿಲ್ಲ. ಯಾವುದೇ ಸಮಸ್ಯೆ ಎದುರಾದರೂ ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಹೇಳುವವರು ಕೇಳುವವರೇ ಇಲ್ಲದಂತೆ ಅವ್ಯವಸ್ಥೆ ಇದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.