ADVERTISEMENT

ಕೊಪ್ಪಳ: ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:18 IST
Last Updated 27 ಜೂನ್ 2024, 15:18 IST
   

ಕೊಪ್ಪಳ: ಪ್ರಯಾಣಿಕರು ಇತ್ತೀಚೆಗೆ ಕಲ್ಯಾಣ ಕರ್ನಾಟಕ ಸಾರಿಗೆಯ ಸರ್ಕಾರಿ ಬಸ್‌ನಲ್ಲಿ ಬಿಟ್ಟು ಹೋಗಿದ್ದ ನಗದು ಮತ್ತು ₹15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕೊಪ್ಪಳ ಘಟಕದ ಬಸ್‌ ಚಾಲಕ ಚರ್ಲಿಂಗಪ್ಪ ಹುಬ್ಬಳ್ಳಿ ಮತ್ತು ನಿರ್ವಾಹಕ ಸಂಗನಗೌಡ ಪಾಟೀಲ ಅವರು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಜು. 23ರಂದು ರಾತ್ರಿ ನಗರದ ರಮೇಶ ಜೈನ್ ಹಾಗೂ ದಿನೇಶ್ ಜೈನ್ ಅವರು ಕೌಟುಂಬಿಕ ಕಾರ್ಯಕ್ರಮಕ್ಕಾಗಿ ಕುಟುಂಬ ಸಮೇತರಾಗಿ ಕೊಪ್ಪಳದಿಂದ ಪುಣೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಪುಣೆಗೆ ತಲುಪಿದ ಬಸ್‌ನಲ್ಲಿ ಜೈನ್‌ ಸಹೋದರರು ಮಹತ್ವದ ಬ್ಯಾಗ್‌ ಬಿಟ್ಟು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಬ್ಯಾಗ್‌ ಬಿಟ್ಟು ಬಂದಿದ್ದು ನೆನಪಾಗಿ ಚಾಲಕ ಹಾಗೂ ನಿರ್ವಾಹಕರನ್ನು ಸಂಪರ್ಕಿಸಿದಾಗ ಬ್ಯಾಗ್‌ ಬಸ್‌ನಲ್ಲಿಯೇ ಇದೆ ಎಂದು ಹೇಳಿದಾಗ ನಿರುಮ್ಮಳರಾಗಿದ್ದಾರೆ.

‘ಸಹೋದರಿಯ ವಿವಾಹ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಪುಣೆಗೆ ಹೋದಾಗ ಈ ಘಟನೆ ನಡೆದಿದೆ. ಆಟೊದಲ್ಲಿ ಆದ ಗೊಂದಲದಿಂದಾಗಿ ಮಹತ್ವದ ವಸ್ತುಗಳು ಇದ್ದ ಬ್ಯಾಗ್‌ ಬಿಟ್ಟು ಬಂದಿದ್ದು ಬೆಳಕಿಗೆ ಬಂದಿದೆ. ಸಾರಿಗೆ ಸಿಬ್ಬಂದಿ ನಮ್ಮ ಬ್ಯಾಗ್ ಜೋಪಾನವಾಗಿ ಇಟ್ಟುಕೊಂಡಿದ್ದರು. ಅವರ ಪ್ರಾಮಾಣಿಕತೆಗೆ ಏನು ಹೇಳಿದರೂ ಕಡಿಮೆಯೇ’ ಎಂದು ರಮೇಶ್ ಜೈನ್ ಹೇಳಿದರು. ರಮೇಶ್‌ ಕುಟುಂಬದವರು ಪ್ರಾಮಾಣಿಕತೆ ಮೆರೆದ ಚಾಲಕ ಹಾಗೂ ನಿರ್ವಾಹಕರಿಗೆ ಗುರುವಾರ ಇಲ್ಲಿನ ಕೇಂದ್ರಿಯ ಬಸ್‌ ನಿಲ್ದಾಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.