ಕುಕನೂರು: ತಾಲ್ಲೂಕು ವ್ಯಾಪ್ತಿಯ ಶಿರೂರು ಮತ್ತು ಬಳಗೇರಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಣ್ಣು ತುಂಬಿದ್ದ ಲಾರಿಗಳು ಹಾಗೂ ಟ್ರ್ಯಾಕ್ಟರ್ ರಗಳ ದಂಧೆಕೋರರು ಅಕ್ರಮದಲ್ಲಿ ತೊಡಗಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೂ ಅಕ್ರಮ ಮರಳು ಸಾಗಣೆ ಜಾಲದ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಇದೆ. ಆದರೂ ಈ ಅಕ್ರಮ ದಂಧೆಗೆ ಶಾಶ್ವತ ಪರಿಹಾರ ದೊರೆತಿಲ್ಲ.
ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಖಚಿತ ಮಾಹಿತಿ ನೀಡಿದರೂ ಕಾನೂನು ಕ್ರಮ ಜರುಗುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಶಿರೂರು ಹಾಗೂ ಬಳಗೇರಿ ಹಳ್ಳಗಳಿಂದ ಮುಂಜಾನೆ 4 ಗಂಟೆ ಹೊತ್ತಿಗೆ ಪಿಕಪ್ ವಾಹನದ ಮೂಲಕ ಹಳ್ಳದ ಅಕ್ಕಪಕ್ಕದಲ್ಲಿ ಮರಳು ಸಂಗ್ರಹಿಸಿಟ್ಟು ರಾತ್ರಿ 11 ಗಂಟೆ ನಂತರ ಟಿಪ್ಪರ್ ಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಳಗೇರಿ ನಿವಾಸಿಗಳು ಹೇಳುತ್ತಾರೆ..
ಯತೇಚ್ಛವಾಗಿ ಹಳ್ಳದಲ್ಲಿ ಮರಳನ್ನ ತೆಗೆಯುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಇದರಿಂದ ರೈತರಿಗೆ ಬಹಳ ತೊಂದರೆಯಾಗಲಿದೆ. ರೈತರು ಹಾಗೂ ಅಲ್ಲಿ ನಿವಾಸಿಗಳು ಎಷ್ಟೋ ಬಾರಿ ಪೊಲೀಸ್ ಇಲಾಖೆಗೆ ಮನವಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಶಿರೂರ್ ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.
ಅಕ್ರಮವಾಗಿ ಮರಳು ಸಾಗಿಸುವ ಟ್ಯಾಕ್ಟರ್ ಗಳ ಹಾಗೂ ಟಿಪ್ಪರ್ಗಳ ನಂಬರ್ ಪ್ಲೇಟ್ ಗಳಿಲ್ಲ. ನಂಬರ್ ಪ್ಲೇಟ್ ಗಳಿಲ್ಲದ ಟ್ಯಾಕ್ಟರ್ಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಇಲಾಖೆ ಕಣ್ಮುಚ್ಚಿ ಕುಳಿತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.
ಅಕ್ರಮವಾಗಿ ಮರಳನ್ನ ಸಾಗಿಸುತ್ತಾರೋ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಗಳು ಅಧಿಕಾರಿಗಳ ಭಯದಿಂದ ಗ್ರಾಮ ಹಾಗೂ ಪಟ್ಟಣದ ರಸ್ತೆಗಳಲ್ಲಿ ಅತ್ಯಂತ ವೇಗವಾಗಿ ಚಲಿಸುವುದರಿಂದ ಅಲ್ಲಿಯ ಪ್ರಯಾಣಿಕರಿಗೆ ಜೀವ ಭಯ ಉಂಟಾಗುತ್ತಿದೆ.
ಅಕ್ರಮ ಮರಳದಂತೆ ವಿಷಯ ನನ್ನ ಗಮನಕ್ಕೆ ಬಂದಿರುವುದಿಲ್ಲ. ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳನ್ನು ವಿಚಾರಿಸಿ ಅಕ್ರಮ ಮರಳದಂತೆ ತಡೆಗಟ್ಟುತ್ತೇನೆ ಎಂದು ತಹಶೀಲ್ದಾರ್ ಪ್ರಾಣೇಶ್ ಎಚ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.