ADVERTISEMENT

ಕುಕನೂರ: ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ!

ಬಿರು ಬೇಸಿಗೆಯಲ್ಲಿ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:09 IST
Last Updated 3 ಏಪ್ರಿಲ್ 2024, 15:09 IST
ಕುಕನೂರಿನ ಬಸ್ ನಿಲ್ದಾಣದಲ್ಲಿ ನೀರಿನ ಸಂಪ್‌ ನ ಮೇಲೆ ಹರಡಿರುವ ಕಸದ ರಾಶಿ
ಕುಕನೂರಿನ ಬಸ್ ನಿಲ್ದಾಣದಲ್ಲಿ ನೀರಿನ ಸಂಪ್‌ ನ ಮೇಲೆ ಹರಡಿರುವ ಕಸದ ರಾಶಿ   

ಕುಕನೂರು: ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ₹ 4 ಕೋಟಿ ವೆಚ್ಚದಲ್ಲಿ  ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಬೆಂಗಳೂರು, ಮೈಸೂರು, ಬೀದರ್, ಹುಬ್ಬಳ್ಳಿ ಸೇರಿ ತಾಲ್ಲೂಕಿನ ವಿವಿಧ ಗ್ರಾಮಕ್ಕೆ ತೆರಳಲು ಪಟ್ಟಣದ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ನಿತ್ಯ ಕಾಡುತ್ತಿದೆ. ಆದರೆ ಬೇಸಿಗೆಯಲ್ಲಿ ಬೆಂಕಿಯಂತೆ ಸುಡುವ ಬಿಸಿಲಿನಲ್ಲಿ ಪ್ರಯಾಣಿಕರ ದಾಹ ನೀಗಿಸುವ ವ್ಯವಸ್ಥೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮುಂದಾಗಿಲ್ಲ.  ಇದರಿಂದ ನಿತ್ಯ ತಾಲ್ಲೂಕು ಕೇಂದ್ರದ ಬಸ್‌ ನಿಲ್ದಾಣಕ್ಕೆ ಬರುವ 1 ಸಾವಿರದಿಂದ 2 ಸಾವಿರ ಪ್ರಯಾಣಿಕರು, ವಿದ್ಯಾರ್ಥಿಗಳು ನೀರಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. 

ಅನಿವಾರ್ಯವಾಗಿ ನಿಲ್ದಾಣದ ಮುಂಭಾಗದಲ್ಲಿರುವ ಖಾಸಗಿ ಹೋಟೆಲ್ ಮತ್ತು ಅಂಗಡಿಗಳಿಗೆ ಹೋಗಿ ನೀರು ಕುಡಿಯುತ್ತಿದ್ದಾರೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಸಂಘ ಸಂಸ್ಥೆಗಳು ಪ್ರಯಾಣಿಕರಿಗೆ ಮಡಕೆಯಲ್ಲಿ ತಂಪು ನೀರಿನ  ವ್ಯವಸ್ಥೆ ಮಾಡುತ್ತಿದ್ದರು. ಆದರೆ ಈ ವರ್ಷ ಮಾತ್ರ ಅಂತಹ ವ್ಯವಸ್ಥೆ ಮಾಡಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

‘ಬಸ್ ನಿಲ್ದಾಣದ ಆವರಣದ ಸಂಪ್‌ ಅನ್ನು ನಾಲ್ಕು ವರ್ಷಗಳಿಂದ ಸ್ವಚ್ಛ ಮಾಡಿಲ್ಲ. ಸಂಪ್‌ನಲ್ಲಿನ ಗಲೀಜು ನೀರನ್ನೇ ಬಸ್‌ ನಿಲ್ದಾಣದ ಯಾಂಟೀನ್‌ನಲ್ಲಿ ಬಳಸಲಾಗುತ್ತಿದ್ದು, ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕುಡಿಯಲು ಇದೇ ನೀರು ನೀಡಲಾಗುತ್ತಿದೆ. ಇದರಿಂದ ಜನರಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ’ ಎಂದು ಪ್ರಯಾಣಿಕ ಬಸವರಾಜ ದೂರಿದರು.

ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು ಇಲ್ಲದ್ದರಿಂದ ಊರಿಗೆ ಹೋಗಿ ನೀರು ಕುಡಿಯುವುದು ಅನಿವಾರ್ಯವಾಗಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

-ಕಾಲೇಜು ವಿದ್ಯಾರ್ಥಿನಿಯರು ಕುಕನೂರ

ನಾಳೆಯಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.

-ಸುನಿಲ್ ಐದ್ರಿ ಘಟಕ ವ್ಯವಸ್ಥಾಪಕ ಕುಕನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.