ADVERTISEMENT

ಕುಷ್ಟಗಿ ತಾಲ್ಲೂಕಿನಲ್ಲಿ ಕುಂಭದ್ರೋಣ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 6:50 IST
Last Updated 13 ಜೂನ್ 2024, 6:50 IST
ಕುಷ್ಟಗಿ 4ನೇ ವಾರ್ಡಿನ ಮನೆ ಸುತ್ತ ಮಳೆ ನೀರು ಸಂಗ್ರಹವಾಗಿರುವುದು
ಕುಷ್ಟಗಿ 4ನೇ ವಾರ್ಡಿನ ಮನೆ ಸುತ್ತ ಮಳೆ ನೀರು ಸಂಗ್ರಹವಾಗಿರುವುದು   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಭಾರಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಗಾಳಿ ಇಲ್ಲದೆ ಮಳೆ ಧಾರಾಕಾರವಾಗಿ ಸುರಿದಿದ್ದು ಪಟ್ಟಣದ ಅನೇಕ ಕಾಲೊನಿಗಳು ಜಲಾವೃತಗೊಂಡಿವೆ. ಕೊಪ್ಪಳ ರಸ್ತೆಯಿಂದ ಬರುವ ಮುಖ್ಯಕಾಲುವೆ ತುಂಬಿ ಬಂದು ಮತ್ತು ಪಟ್ಟಣದ ಚರಂಡಿಗಳ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದಿದ್ದರಿಂದ 4, 7ನೇ ವಾರ್ಡುಗಳಲ್ಲಿನ ಮನೆಗಳ ಸುತ್ತ ಸಾಕಷ್ಟು ನೀರು ಸಂಗ್ರಹವಾಗಿತ್ತು.

ಅದೇ ರೀತಿ ಕರೀಂ ಕಾಲೊನಿ ಪಕ್ಕದಲ್ಲಿನ ಕಾಲುವೆಯಲ್ಲಿನ ಸೇತುವೆ ಕಟ್ಟಿಕೊಂಡು ಭಾರಿ ಪ್ರಮಾಣದಲ್ಲಿ ಕೊಳಚೆ ನೀರು ಕಾಲೊನಿ ಹೊಕ್ಕು ಶಾದಿಮಹಲ್ ಸುತ್ತಲಿನ ಇಡಿ ಪ್ರದೇಶ ಜಲಾವೃತಗೊಂಡಿತ್ತು. ಇದರಿಂದ ಜನರು ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ ಉಂಟಾಗಿತ್ತು. ಕಾಲುವೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದರಿಂದ ಜನರು ಇಡಿ ರಾತ್ರಿ ತೊಂದರೆ ಅನುಭವಿಸುವಂತಾಯಿತು.

ADVERTISEMENT

ತಾಲ್ಲೂಕಿನಾದ್ಯಂತ ಗ್ರಾಮಾಂತರ ಪ್ರದೇಶದಲ್ಲಿಯೂ ಭಾರಿ ಮಳೆ ಬಂದಿರುವ ಬಗ್ಗೆ ಮಾಹಿತಿ ಬಂದಿದೆ. ಹೊಲಗದ್ದೆಗಳಲ್ಲ ನೀರು ಸಂಗ್ರಹವಾಗಿತ್ತು, ಒಡ್ಡುಗಳು ಒಡೆದುಹೋಗಿವೆ, ಹಳ್ಳಕೊಳ್ಳಗಳಿಗೆ ನೀರು ಹರಿದು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂಜೆ ಮಳೆ ಆರಂಭಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆಗೆ ಹೊಲಗಳಿಗೆ ತೆರಳಿದ್ದ ರೈತರು, ಕೃಷಿಕಾರ್ಮಿಕರು ಬಹಳಷ್ಟು ತೊಂದರೆ ಅನುಭವಿಸಿದರು ಎಂದು ಮೂಲಗಳು ತಿಳಿಸಿವೆ.

ಕುಷ್ಟಗಿ ಕರೀಂ ಕಾಲೋನಿ ಪ್ರದೇಶ ಜಲಾವೃತಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.