ADVERTISEMENT

ಕುಷ್ಟಗಿ: ‘ಸತತ ಗೆಲುವಿಲ್ಲ’ ಇತಿಹಾಸದ ಸುತ್ತ ಚರ್ಚೆ ಗಿರಕಿ

ಕುತೂಹಲ ಮೂಡಿಸಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 11 ಮೇ 2023, 13:44 IST
Last Updated 11 ಮೇ 2023, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಕುಷ್ಟಗಿ: ವಿಧಾನಸಭೆ ಚುನಾವಣೆಯಲ್ಲಿ ಕೆಲವರು ಎರಡು ಬಾರಿ ಗೆದ್ದಿರಬಹುದು ಆದರೆ ಸತತ ಗೆಲುವು ಯಾರಿಗೂ ಇಲ್ಲ ಎಂಬುದಕ್ಕೆ ಈ ಕ್ಷೇತ್ರದಲ್ಲಿ ಏಳು ದಶಕಗಳಲ್ಲಿನ ಚುನಾವಣೆಗಳ ಫಲಿತಾಂಶಗಳು ಹೇಳುತ್ತಿವೆ. ಫಲಿತಾಂಶಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದ್ದು ತೀವ್ರ ಕುತೂಹಲ ಮೂಡಿಸಿದೆ.

ಈ ಕ್ಷೇತ್ರದಲ್ಲಿನ ಇತಿಹಾಸ ಮುಂದುವರೆಯುವುದೇ ಅಥವಾ ಹೊಸ ಇತಿಹಾಸ ನಿರ್ಮಾಣವಾಗುತ್ತದೆಯೇ ಎಂಬ ವಿಷಯದ ಸುತ್ತ ರಾಜಕೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಚರ್ಚೆ ಗಿರಕಿ ಹೊಡೆಯುತ್ತಿದೆ.

ಯಾರೂ ಇಲ್ಲಿ ಸತತ ಆಯ್ಕೆಯಾಗುವುದಿಲ್ಲ ಎಂಬ ವಿಷಯದಲ್ಲಿ ಈ ಕ್ಷೇತ್ರ ರಾಜ್ಯದ ಗಮನಸೆಳೆಯುತ್ತ ಬಂದಿದೆ. ಸಾಮಾನ್ಯರ ಮಾತಿನಲ್ಲೂ ಇತಿಹಾಸ ಕುರಿತ ಚರ್ಚೆಯೇ ಹೆಚ್ಚಿನ ಮಹತ್ವ ಪಡೆಯುತ್ತಿದೆ.

ADVERTISEMENT

ಈ ಕ್ಷೇತ್ರದ ಕಣದಲ್ಲಿ 15 ಅಭ್ಯರ್ಥಿಗಳಿದ್ದರೂ ಬಿಜೆಪಿಯ ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಇಬ್ಬರ ಮಧ್ಯೆ ಮಾತ್ರ ನೇರ ಸ್ಪರ್ಧೆ ಏರ್ಪಟ್ಟಿತ್ತು. ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಇಬ್ಬರೂ ಗೆಲುವು ತಮ್ಮದೇ ಎಂದೇ ಪ್ರತಿಪಾದಿಸುತ್ತಿದ್ದಾರೆ.

15,000ಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆಂಬ ವಿಶ್ವಾಸ ದೊಡ್ಡನಗೌಡರದ್ದು. ಕಳೆದ ಬಾರಿ 18 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿರುವ ಹಾಲಿ ಶಾಸಕ ಅಮರೇಗೌಡ ಬಯ್ಯಾಪುರ ಈ ಬಾರಿಯ ಗೆಲುವು ತಮ್ಮದೇ ಎಂದಿದ್ದರೂ ಗೆಲುವಿನ ಅಂತರವನ್ನು ನಾಲ್ಕೈದು ಸಾವಿರಕ್ಕೆ ಇಳಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಈ ಕ್ಷೇತ್ರದಲ್ಲಿನ ದುರಾಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜನ ಈ ಬಾರಿಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದಾರೆ ಎಂದೇ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ. ಕೆಲಸ ಮಾಡದವರು ಎರಡನೇ ಬಾರಿಗೆ ಅಯ್ಕೆಯಾಗಿಲ್ಲ ಅಷ್ಟೇ, 2013ರ ಚುನಾವಣೆಯಲ್ಲಿಯೇ ಇತಿಹಾಸ ಮುರಿಯಬೇಕಿತ್ತು, ಬಿಎಸ್‌ಆರ್‌ ಪಕ್ಷದ ಲಿಂಗಾಯತ ಕೋಮಿನ ರಾಜಶೇಖರಗೌಡ ಗೋನಾಳ ಸ್ಪರ್ಧೆಯಿಂದಾಗಿ ಸೋಲುವಂತಾಯಿತು ಎಂದೇ ಬಯ್ಯಾಪುರ ಹೇಳಿದರು. ಈ ಬಾರಿ ಈ ಕ್ಷೇತ್ರಕ್ಕೆ ಅಂಟಿರುವ ಇತಿಹಾಸದ ಕಳಂಕ ಕಳಚಲಿದೆ ಎಂದೆ ಬಯ್ಯಾಪುರ ಪ್ರಚಾರದ ಸಂದರ್ಭದಲ್ಲಿ ಹೇಳುತ್ತ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.