ಕುಷ್ಟಗಿ: ತಾಲ್ಲೂಕಿನ ಕೆಲ ಭಾಗಗಳಲ್ಲಿ ಈಚೆಗೆ ಸುರಿದ ಮಳೆ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಕಡಲೆ ಇತರೆ ಬೆಳೆ ಬೆಳವಣಿಗೆಗೆ ಪೂರಕವಾಗಿದೆ. ಬೇಸಿಗೆ ಶೇಂಗಾ ಬಿತ್ತನೆಗೂ ಅನುಕೂಲವಾಗಿದ್ದು, ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಶೇಂಗಾ ಪ್ರಮುಖ ಎಣ್ಣೆ ಕಾಳುಗಳಲ್ಲಿ ಒಂದು. ಹಾಗಾಗಿ ರೈತರು ಬೇಸಾಯದ ಖರ್ಚುವೆಚ್ಚಗಳು ಹೆಚ್ಚಾದರೂ ಶೇಂಗಾ ಬೆಳೆಯುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಈ ಭಾಗದಲ್ಲಿ ನೀರಾವರಿ ಆಶ್ರಯ ಇಲ್ಲ. ಕೊಳವೆಬಾವಿಗಳ ಮೂಲಕ ರೈತರು ನೀರಾವರಿ ಅನುಕೂಲ ಕಲ್ಪಿಸಿಕೊಂಡಿದ್ದು ಶೇಂಗಾ ಬಿತ್ತನೆ ಕಾರ್ಯ ಭರ್ಜರಿಯಾಗಿ ಮುಂದುವರಿಸಿದ್ದಾರೆ. ಈಗಾಗಲೇ ಬಹಳಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದೊಳಗಿನ ವಾತಾವರಣ ಬೇಸಿಗೆ ಹಂಗಾಮಿನ ಶೇಂಗಾ ಬಿತ್ತನೆಗೆ ಅನುಕೂಲಕರವಾಗಿದ್ದು, ಕಟಾವು ವೇಳೆಗೆ ಮಳೆ ಬರುತ್ತದೆ, ಹೊಟ್ಟು ಕೆಡುತ್ತದೆ ಎಂಬ ಕಾರಣಕ್ಕೆ ರೈತರು ಮುಂಚಿತವಾಗಿಯೇ ಶೇಂಗಾ ಬಿತ್ತನೆ ನಡೆಸುತ್ತಿದ್ದಾರೆ. ಈಗ ಮಳೆಯಾಗಿರುವುದು ಬಿತ್ತನೆಯಾಗಿರುವ ಬೆಳೆಗೆ ಅನುಕೂಲವಾಗಿದೆ. ಅದೇ ರೀತಿ ಮಳೆಯಾದ ನಂತರವೂ ಬಹಳಷ್ಟು ರೈತರು ಶೇಂಗಾ ಬಿತ್ತನೆ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ.
ಕೃಷಿ ಇಲಾಖೆ ಪ್ರಕಾರ ಈ ವರ್ಷದ ಬೇಸಿಗೆ ಬೆಳೆಯಾಗಿ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿದೆ. ಅಂದಾಜು ಶೇ80ರಷ್ಟು ಬಿತ್ತನೆಯಾಗಿದ್ದು, ಗುರಿ ಮೀತಿ ಬಿತ್ತನೆಯಾಗುವ ನಿರೀಕ್ಷೆ ಕೃಷಿ ಇಲಾಖೆಯದ್ದು. ಕಳೆದ ವರ್ಷದ ಇದೇ ಅವಧಿಯಲ್ಲಿ 14,169 ಹೆಕ್ಟೇರ್ ವ್ಯಾಪ್ತಿಯಲ್ಲಿ ಶೇಂಗಾ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜ್ಮೀರಲಿ ಬೆಟಗೇರಿ ‘ಪ್ರಜಾವಾಣಿ’ಗೆ ವಿವರಿಸಿದರು.
ಈ ವರ್ಷ ಉತ್ತಮ ಮಳೆಯಾಗಿರುವ ಕಾರಣಕ್ಕೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಶೇಂಗಾ ಬಿತ್ತನೆ ಪ್ರದೇಶ ಇನ್ನಷ್ಟು ಅಧಿಕಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತರು.
1,057 ಕ್ವಿಂಟಲ್ ಬಿತ್ತನೆ ಬೀಜ ಮಾರಾಟ ಶೇ80ರಷ್ಟು ಶೇಂಗಾ ಬಿತ್ತನೆ ಪೂರ್ಣ
ಬೇಸಿಗೆ ಶೇಂಗಾ ಬಿತ್ತನೆ ಬೀಜಕ್ಕೆ ಅಧಿಕ ಬೇಡಿಕೆ ಇದೆ ಅಗತ್ಯ ಪ್ರಮಾಣದ ಸಂಗ್ರಹವೂ ಇದ್ದು ಬೀಜದ ಕೊರತೆಯಾಗುವುದಿಲ್ಲಅಜ್ಮೀರ್ಅಲಿ ಬೆಟಗೇರಿ ಕೃಷಿ ಸಹಾಯಕ ನಿರ್ದೇಶಕ
ಈಚೆಗೆ ಬಂದ ಮಳೆಯಿಂದ ಕಡಲೆ ಜೋಳಕ್ಕೆ ಅನುಕೂಲವಾಗಿದೆ ಇನ್ನಷ್ಟು ಮಳೆ ಬಂದರೆ ತೇವಾಂಶ ಕೊರತೆಯಾಗುವುದಿಲ್ಲಹನುಮಗೌಡ ನೆರೆಬೆಂಚಿ ರೈತ
ಕಡಲೆ ಜೋಳಕ್ಕೆ ಮಳೆ ಪೂರಕ
ಹಿಂಗಾರು ಕಡಲೆ ಮತ್ತು ಜೋಳದ ಬೆಳೆಗಳಿಗೆ ತೇವಾಂಶ ಕೊರತೆ ಎದುರಾಗುವ ಸಮಯಕ್ಕೆ ಸರಿಯಾಗಿ ಕಳೆದ ವಾರ (ಹನುಮಸಾಗರ ಹೋಬಳಿ ಹೊರತುಪಡಿಸಿ) ಉತ್ತಮ ಮಳೆಯಾಗಿದ್ದರಿಂದ ಬೆಳೆಗಳಿಗೆ ಅನುಕೂಲವಾಗಿದೆ. ಕಡಲೆ ಬೆಳೆ ಉತ್ತಮ ರೀತಿಯಲ್ಲಿದ್ದು ಮೊಗ್ಗು ಹೂವು ಬಿಡುವ ಹಂತ ತಲುಪಿದೆ. ಕೀಟ ರೋಗದ ಬಾಧೆ ಇಲ್ಲವಾದರೂ ಮುಂಜಾಗ್ರತೆಗಾಗಿ ರೈತರು ಈಗಾಗಲೇ ಪೀಡೆನಾಶಕ ಸಂಪಡಿಸಿರುವುದು ಕಂಡುಬಂದಿದೆ. ಹಿಂದಿನ ವರ್ಷ 22076 ಹೆಕ್ಟೇರ್ ಬಿತ್ತನೆಯಾಗಿದ್ದ ಕಡಲೆ ಈ ಬಾರಿ ಕೇವಲ 9822 ಹೆಕ್ಟೇರ್‌ದಲ್ಲಿ ಬಿತ್ತನೆಯಾಗಿದೆ. ಕಡಲೆ ಬೆಳೆಯುವ ಪ್ರದೇಶದಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ತೊಗರಿಗೆ ಮೊರೆಹೋಗಿದ್ದರಿಂದ ಕಡಲೆ ಬೆಳೆ ಬಿತ್ತನೆ ಪ್ರದೇಶ ಕುಸಿದಿದೆ. ಅದೇ ರೀತಿ ಸುಮಾರು 12 ಸಾವಿರ ಹೆಕ್ಟೇರ್‌ದಲ್ಲಿ ಬಿಳಿಜೋಳದ ಬಿತ್ತನೆ ಗುರಿ ಇತ್ತಾದರೂ ಗುರಿಯ ಅರ್ಧದಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.