ADVERTISEMENT

ಕುಷ್ಟಗಿ | ಕೆಕೆಆರ್‌ಡಿಬಿ ಅನುದಾನ ದುರ್ಬಳಕೆ: ಆರೋಪ

ನಾರಾಯಣರಾವ ಕುಲಕರ್ಣಿ
Published 14 ನವೆಂಬರ್ 2024, 5:12 IST
Last Updated 14 ನವೆಂಬರ್ 2024, 5:12 IST
<div class="paragraphs"><p><strong>ಕುಷ್ಟಗಿ ಮುಖ್ಯರಸ್ತೆಯಲ್ಲಿ ಹೊಸದಾಗಿ ಕಂಬಗಳ ಅಳವಡಿಕೆಗೆ ಬುನಾದಿ ಹಾಕುತ್ತಿರುವುದು ಮಂಗಳವಾರ ಕಂಡುಬಂದಿತು</strong><br></p></div>

ಕುಷ್ಟಗಿ ಮುಖ್ಯರಸ್ತೆಯಲ್ಲಿ ಹೊಸದಾಗಿ ಕಂಬಗಳ ಅಳವಡಿಕೆಗೆ ಬುನಾದಿ ಹಾಕುತ್ತಿರುವುದು ಮಂಗಳವಾರ ಕಂಡುಬಂದಿತು

   

ಕುಷ್ಟಗಿ: ಪಟ್ಟಣದಲ್ಲಿ ಬೀದಿದೀಪಗಳು ಇಲ್ಲದ ಅನೇಕ ಮುಖ್ಯ ರಸ್ತೆಗಳಿದ್ದು, ಅಂತಹ ಕಡೆ ಬೀದಿದೀಪ ಅಳವಡಿಸುವುದನ್ನು ಬಿಟ್ಟು ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ಬೀದಿದೀಪಗಳ ಕಂಬಗಳ ಪಕ್ಕದಲ್ಲೇ ಪುನಃ ಬೀದಿ ದೀಪದ ಕಂಬಗಳನ್ನು ಹಾಕಲು ಮುಂದಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕ್ರಮಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.

ಅಗತ್ಯವಿರುವ ಕಡೆ ಬಿಟ್ಟು ಅನಗತ್ಯವಾಗಿ ಕಂಬಗಳನ್ನು ಅಳವಡಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸರ್ಕಾರದ ಕೋಟ್ಯಾಂತರ ರೂಪಾಯಿ ಅನುದಾನವನ್ನು ವ್ಯರ್ಥ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿರುವ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್‌) ಮಾತ್ರ ದೀಪದ ಕಂಬ ಅಳವಡಿಸುವ ಕೆಲಸವನ್ನು ಸಮರ್ಥಿಸಿಕೊಂಡಿದೆ. ಈ ಕಾಮಗಾರಿ ಕುರಿತು ಪುರಸಭೆಗೆ ಯಾವುದೇ ಮಾಹಿತಿ ಇಲ್ಲ ಎಂಬುದು ತಿಳಿದು ಬಂದಿದೆ.

ADVERTISEMENT

2023-24ನೇ ಹಣಕಾಸು ವರ್ಷದಲ್ಲಿನ ಕ್ರಿಯಾ ಯೋಜನೆಗೆ ಕೆಕೆಆರ್‌ಡಿಬಿ ಅನುಮೋದನೆ ನೀಡಿದ್ದು ಕುಷ್ಟಗಿಯಲ್ಲಿ 60 ಹಾಗೂ ತಾವರಗೇರಾದಲ್ಲಿ 44 ಬೀದಿದೀಪ ಕಂಬಗಳನ್ನು ಅಳವಡಿಸಲು ₹ 1.50 ಕೋಟಿ ಅನುದಾನ ಮಂಜೂರಾಗಿದೆ. ರಸ್ತೆ ವಿಭಜಕದ ಮಧ್ಯೆ ಇರುವ ಬೀದಿದೀಪಗಳ ಕಂಬಗಳ ಪಕ್ಕದಲ್ಲೇ ಬೇರೆ ಕಂಬ ಅಳವಡಿಸುವ ಸಲುವಾಗಿ ಕೆಆರ್‌ಡಿಎಲ್‌ ಬುನಾದಿ ತೆಗೆದು ಕಾಂಕ್ರೀಟ್‌ ಅಳವಡಿಸುತ್ತಿರುವುದು ಮಂಗಳವಾರ ಕಂಡುಬಂತು.

ಎಂಜಿನಿಯರ್‌ ಹೇಳಿದ್ದು: ಈ ಕುರಿತು ಪ್ರತಿಕ್ರಿಯಿಸಿದ ಕೆಆರ್‌ಡಿಎಲ್‌ ಎಂಜಿನಿಯರ್‌ ಇರ್ಫಾನ್‌, ಹಳೆಯದಾಗಿರುವ ಈಗಿರುವ ಕಂಬಗಳನ್ನು ತೆಗೆದು ಪುರಸಭೆಗೆ ಮರಳಿಸುತ್ತೇವೆ. ಅಲ್ಲದೇ ಶಾಸಕರ ಸೂಚನೆಯಂತೆ ಮೂಲ ಕ್ರಿಯಾ ಯೋಜನೆ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಿಂದ ಬಸವೇಶ್ವರ ವೃತ್ತ ಅಲ್ಲಿಂದ ಮಲ್ಲಯ್ಯ ವೃತ್ತದವರೆಗೆ, ಮಾರುತಿ ವೃತ್ತದಿಂದ ಕನಕದಾಸ ವೃತ್ತದವರೆಗೆ ಬೀದಿದೀಪ ಕಂಬ ಅಳವಡಿಸಲು ಅನುಮೋದನೆ ದೊರೆತಿತ್ತು. ಆದರೆ ಹೆದ್ದಾರಿಯಿಂದ ಬಸವೇಶ್ವರ ವೃತ್ತ ಮತ್ತು ಮಾರುತಿ ವೃತ್ತದಿಂದ ಕನಕದಾಸ ವೃತ್ತದವರೆಗೆ ಪುನಃ 30 ಬೀದಿದೀಪ ಕಂಬಗಳನ್ನು ಅಳವಡಿಸುವ ಕಾಮಗಾರಿ ಬಗ್ಗೆ ಪುರಸಭೆ ಪ್ರತ್ಯೇಕ ಟೆಂಡರ್‌ ನಡೆಸಿದ್ದು, ಈಗ ಅದನ್ನು ಬದಲಾಯಿಸಲು ಬರುವುದಿಲ್ಲ. ಹಾಗಾಗಿ ಬಸವೇಶ್ವರ ವೃತ್ತದಿಂದ ಮಲ್ಲಯ್ಯ ವೃತ್ತದವರೆಗೆ ಮಾತ್ರ ಬೀದಿದೀಪ ಕಂಬ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ಎಂಜಿನಿಯರ್ ಮತ್ತು ಕೆಲ ಸದಸ್ಯರೊಂದಿಗೂ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಶಾಸಕರ ಗಮನಕ್ಕಿಲ್ಲದೇ ಕಾಮಗಾರಿ

ಸದ್ಯ ಇರುವ ಕಂಬಗಳಿಗೆ ಬಲ್ಬ್‌ ಹಾಕಿದರೆ ಸಾಕು ಇಡಿ ರಸ್ತೆ ಝಗಮಗಿಸುತ್ತದೆ. ಆದರೆ ಬಹುತೇಕ ಸಂದರ್ಭದಲ್ಲಿ ಬಲ್ಬ್‌ಗಳು ಸುಟ್ಟು ಕಂಬಗಳು ಮಾತ್ರ ಇರುತ್ತವೆ. ದೀಪಾವಳಿ ಸಂದರ್ಭದಲ್ಲಿ ಬಲ್ಬ್ ಅಳವಡಿಸಲಾಗಿದ್ದು, ಕಾಲಕಾಲಕ್ಕೆ ನಿರ್ವಹಣೆ ಮಾಡುತ್ತಿದ್ದರೆ ಜನರಿಗೆ ಕತ್ತಲಿನ ಅನುಭವವೇ ಇರುವುದಿಲ್ಲ. ಆದರೆ ಅನಗತ್ಯವಾಗಿ ಪುನಃ ಕಂಬಗಳನ್ನು ಹಾಕಿ ಸರ್ಕಾರದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಲಾಗುತ್ತಿದೆ ಎಂದು ಪುರಸಭೆಯ ಕೆಲ ಸದಸ್ಯರು, ಸಾರ್ವಜನಿಕರು ಆರೋಪಿಸಿದ್ದಾರೆ.

‘ಕಾಮಗಾರಿಯ ಮಾರ್ಗವನ್ನೇ ಬದಲಾಯಿಸುವ ನಿಟ್ಟಿನಲ್ಲಿ ಕುಮ್ಮಕ್ಕು ನೀಡುತ್ತಿರುವ ಶಾಸಕ ದೊಡ್ಡನಗೌಡ ಪಾಟೀಲರ ಹಿಂಬಾಲಕರಾದ ಪುರಸಭೆಯ ಸದಸ್ಯರೊಬ್ಬರು ಕೆಆರ್‌ಡಿಎಲ್‌ ಎಂಜಿನಿಯರ್‌ಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ವಿಷಯದ ವಸ್ತುಸ್ಥಿತಿ ಶಾಸಕರ ಗಮನಕ್ಕೂ ಬಂದಿಲ್ಲ’ ಎಂದು ಪುರಸಭೆಯ ಸದಸ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.