ADVERTISEMENT

ಕುಷ್ಟಗಿ | ನಡವಲಕೊಪ್ಪ: ಶ್ರೀಗಂಧದ ಮರ ಕಳ್ಳತನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:45 IST
Last Updated 5 ಜುಲೈ 2024, 4:45 IST
ಗಂಧದ ಗಿಡಗಳು ಕಳುವಾಗಿರುವ ಕುಷ್ಟಗಿ ತಾಲ್ಲೂಕು ನಡವಲಕೊಪ್ಪ ಬಳಿ ಶಿವನಗುತ್ತಿ ಎಂಬುವವರ ತೋಟದಲ್ಲಿ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಗಂಧದ ಗಿಡಗಳು ಕಳುವಾಗಿರುವ ಕುಷ್ಟಗಿ ತಾಲ್ಲೂಕು ನಡವಲಕೊಪ್ಪ ಬಳಿ ಶಿವನಗುತ್ತಿ ಎಂಬುವವರ ತೋಟದಲ್ಲಿ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದರು   

ಕುಷ್ಟಗಿ: ತಾಲ್ಲೂಕಿನ ನಡವಲಕೊಪ್ಪ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಸ್‌.ಬಿ.ಶಿವನಗುತ್ತಿ ಎಂಬುವವರಿಗೆ ಸೇರಿದ ತೋಟದಲ್ಲಿ ಗುರುವಾರ ಬೆಳಗಿನ ಜಾವ ಶ್ರೀಗಂಧದ ಗಿಡಗಳನ್ನು ಕಡಿದು ಕಳವು ಮಾಡಲಾಗಿದೆ.

ಶ್ರೀಗಂಧದ 13  ಗಿಡಗಳನ್ನು ಕಡಿದು ಹಾಕಲಾಗಿದ್ದು ಅವುಗಳಲ್ಲಿ ಶ್ರೀಗಂಧದ ತಿರುಳು (ಹಾಟ್‌ಉಡ್‌) ಬಲಿತ ಎರಡು ಗಿಡಗಳ ಕಾಂಡಗಳನ್ನು ಮಾತ್ರ ಹೊತ್ತೊಯ್ದಿದ್ದಾರೆ.

ಪೊಲೀಸರಿಗೆ ದೂರು ನೀಡಲಾಗಿದ್ದು ಅವರು ರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾದೇಶಿಕ ವಲಯ ಅರಣ್ಯ (ಪ್ರಭಾರ) ಅಧಿಕಾರಿ ರಿಯಾಜ್ ಅಹ್ಮದ್ ಮತ್ತು ಗಸ್ತು ಪಾಲಕ ಎಚ್.ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳುವು ಆಗಿರುವ ಶ್ರೀಗಂಧ ಕಾಂಡಗಳ ಮೌಲ್ಯವನ್ನು ಸಾಬೂನು ಮತ್ತು ಮಾರ್ಜಕ ತಯಾರಿಕಾ ಕಾರ್ಖಾನೆ ನಿರ್ಧರಿಸಲಿದೆ.

ADVERTISEMENT

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್‌.ಬಿ.ಶಿವನಗುತ್ತಿ, ‘ ಒಂದು ಸಾವಿರ ಶ್ರೀಗಂಧದ ಸಸಿ ನಾಟಿ ಮಾಡಲಾಗಿತ್ತು. ಬಹಳಷ್ಟು ಗಿಡಗಳು ಬೆಳವಣಿಗೆಯನ್ನೇ ಹೊಂದಿಲ್ಲ. ಅಲ್ಪಸ್ವಲ್ಪ ಬಲಿತ ಗಿಡಗಳು ಈ ಹಿಂದೆ ಎರಡು ಬಾರಿ ಕಳ್ಳತನವಾಗಿವೆ, ಸಹಜವಾಗಿಯೂ ಒಂದಷ್ಟು ಗಿಡಗಳು ಹಾಳಾಗಿ ಸದ್ಯ 370 ಗಿಡಗಳು ಇವೆ. ಅವುಗಳಲ್ಲಿ ಅರ್ಧದಷ್ಟು ಮಾತ್ರ ಗಂಧದ ತಿರುಳು ಹೊಂದಿವೆ. ಮಾರಾಟಕ್ಕೆ ಕೆಎಸ್‌ಡಿಎಲ್ ಸಂಸ್ಥೆಯೊಂದಿಗೆ ಒಪ್ಪಂದವಾಗಿದ್ದು ಅರಣ್ಯ ಇಲಾಖೆ ಅನುಮತಿಯ ನಿರೀಕ್ಷೆಯಲ್ಲಿದ್ದೆವು. ಹೆಚ್ಚಿನ ತಿರುಳು ಇಲ್ಲದಿದ್ದರೂ ಕಳ್ಳರ ಹಾವಳಿ ಕಾರಣಕ್ಕೆ ಅಲ್ಪಸ್ವಲ್ಪ ಬಲಿತ ಗಿಡಗಳನ್ನೆಲ್ಲ ಕಟಾವು ಮಾಡುತ್ತೇವೆ’ ಎಂದು ಹೇಳಿದರು.

ಶ್ರೀಗಂಧದ ಗಿಡಗಳನ್ನು ಕಳ್ಳರಿಂದ ರಕ್ಷಿಸುವುದೇ ಅಸಾಧ್ಯವಾಗಿದೆ. ಇದಕ್ಕೆ ಪರಿಹಾರ ಏನೆಂಬುದೇ ಗೊತ್ತಾಗುತ್ತಿಲ್ಲ.  ಈ ಬಗ್ಗೆ ಸರ್ಕಾರ ರೈತರ ನೆರವಿಗೆ ಬರಬೇಕಿದೆ ಎಂದರು.

ಎಸ್‌.ಬಿ.ಶಿವನಗುತ್ತಿ ಕುಷ್ಟಗಿ ತಾಲ್ಲೂಕಿನಲ್ಲಿ ಶ್ರೀಗಂಧ ನಾಟಿ ಮಾಡಿದವರಲ್ಲಿ ಮೊದಲಿಗರು. 18 ವರ್ಷ ಕಳೆದರೂ ಅವರ ತೋಟದಲ್ಲಿನ ಗಿಡಗಳು ನಿರೀಕ್ಷಿತ ಬೆಳವಣಿಗೆ ಹೊಂದಿಲ್ಲ. ತೇಗದ ನೆರಳಿನಲ್ಲಿ ಗಿಡಗಳು ಬೆಳೆದಿಲ್ಲ ಎಂದೇ ಅರಣ್ಯ ಇಲಾಖೆ ಹೇಳಿದೆ. ಆದರೆ ಅರಣ್ಯ ಇಲಾಖೆಯಿಂದ ಹೊತ್ತೊಯ್ದು ಸಸಿ ಮಾರಾಟ ಮಾಡಿದವರು ಮಾತ್ರ ಉದ್ಧಾರವಾಗಿದ್ದಾರೆ ಎಂದು ಶಿವನಗುತ್ತಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.