ADVERTISEMENT

ಕುಷ್ಟಗಿ: ‘ಅತಿಥಿ’ ದೇವೋ ಭವ

ತಾಲ್ಲೂಕಿನ ಏಳು ಪಿಯು ಕಾಲೇಜಿಗಳಲ್ಲಿ ಆರಕ್ಕೆ ಅತಿಥಿ ಶಿಕ್ಷಕರೇ ಆಸರೆ

ನಾರಾಯಣರಾವ ಕುಲಕರ್ಣಿ
Published 5 ಜುಲೈ 2024, 4:41 IST
Last Updated 5 ಜುಲೈ 2024, 4:41 IST
ಕಾಂಪೌಂಡ್ ಇಲ್ಲದ ಕುಷ್ಟಗಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಮುಂಭಾಗ ಬಯಲು ಬಹಿರ್ದೆಸೆ ತಾಣವಾಗಿದೆ
ಕಾಂಪೌಂಡ್ ಇಲ್ಲದ ಕುಷ್ಟಗಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಮುಂಭಾಗ ಬಯಲು ಬಹಿರ್ದೆಸೆ ತಾಣವಾಗಿದೆ   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ 7 ಸರ್ಕಾರಿ ಜೂನಿಯರ್ ಕಾಲೇಜುಗಳಿದ್ದು ಬಹುತೇಕ ಕಡೆ ಮೂಲಸೌಲಭ್ಯ ಸಮಸ್ಯೆ ಇದೆ. 6 ಕಾಲೇಜುಗಳಿಗೆ ಕಾಯಂ ಪ್ರಾಚಾರ್ಯರಿಲ್ಲದ ಅತಿಥಿ ಉಪನ್ಯಾಸಕರೇ ಜೀವಾಳ.

ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಲಭ್ಯ ಇಲ್ಲದ ಕಾರಣಕ್ಕೆ ಪಟ್ಟಣದ ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜು ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಗಮನಸೆಳೆದಿತ್ತು. ಸದ್ಯ ಆ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. 975 ವಿದ್ಯಾರ್ಥಿನಿಯರಿರುವ ಈ ಕಾಲೇಜಿಗೆ ಪ್ರತ್ಯೇಕ ಶೌಚಾಲಯ, ಮೂರು ಪ್ರಯೋಗಾಲಯ ಕೊಠಡಿಗಳ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ನಿರ್ಮಿತಿ ಕೇಂದ್ರಕ್ಕೆ ₹80 ಲಕ್ಷ ಹಣ ಬಿಡುಡೆಯಾಗಿ ಆದರೆ ವರ್ಷವಾದರೂ ಕಾಮಗಾರಿ ಇನ್ನೂ ಅಪೂರ್ಣವಾಗಿದೆ, ಶೌಚಾಲಯ ಕಟ್ಟಡದ ಗುಣಮಟ್ಟವೂ ಕಳಪೆಯಾಗಿದೆ ಎಂಬ ಆರೋಪಗಳಿವೆ. ಪಕ್ಕದಲ್ಲೇ ₹21 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿರುವ ಇನ್ನೊಂದು ಶೌಚಾಲಯ ಸಂಕೀರ್ಣ ಕಟ್ಟಡ ಉತ್ತಮ ರೀತಿಯಲ್ಲಿದೆ.

ಗಾಂಧಿನಗರದಲ್ಲಿರುವ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜು ಕಟ್ಟಡ ಉತ್ತಮವಾಗಿದ್ದರೂ ಆವರಣ ಗೋಡೆ ಇಲ್ಲದೆ ಬಯಲು ಸುತ್ತಲಿನ ನಿವಾಸಿಗಳಿಗೆ ಬಹಿರ್ದೆಸೆಯ ತಾಣವಾಗಿದೆ.

ADVERTISEMENT

ವಿದ್ಯಾರ್ಥಿಗಳು, ಸಿಬ್ಬಂದಿ ಶೌಚಾಲಯ ಸಮಸ್ಯೆ ಎದರಿಸುತ್ತಿದ್ದಾರೆ. ನಿತ್ಯ ನಾಲ್ಕೈದು ಶುದ್ಧ ನೀರಿನ ಕ್ಯಾನ್‌ಗಳನ್ನು ತರಲೇಬೇಕು. ಕೆಲ ವರ್ಷಗಳ ಹಿಂದಷ್ಟೇ ನಿರ್ಮಿಸಿದ ಕಟ್ಟಡದ ನೆಲಹಾಸು ಕಿತ್ತುಹೋಗಿದೆ.

ಇದ್ದುದರಲ್ಲಿಯೇ ದೋಟಿಹಾಳ ಜ್ಯೂನಿಯರ್ ಕಾಲೇಜಿನ ಮೂಲಸೌಲಭ್ಯಗಳ ಸ್ಥಿತಿ ಉತ್ತಮ. ಶುದ್ಧ ಕುಡಿಯುವ ನೀರಿನ ಸಮಸ್ಯೆ, ಎರಡು ಕೊಠಡಿಗಳ ಛಾವಣಿ ಸೋರುವುದನ್ನು ಬಿಟ್ಟರೆ ಬೇರೆ ಸಮಸ್ಯೆ ಇಲ್ಲ.

ಬೋಧನೆಗೆ ಬಹುತೇಕ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ. ತಾವರಗೇರಾ ಬಾಲಕರ ಕಾಲೇಜು ಹೊರತುಪಡಿಸಿದರೆ ತಾಲ್ಲೂಕಿನಲ್ಲಿರುವ ಉಳಿದ 6 ಕಾಲೇಜುಗಳಿಗೆ ಕಾಯಂ ಪ್ರಾಚಾರ್ಯರೇ ಇಲ್ಲ.

ಕುಷ್ಟಗಿ ಬಾಲಕರ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹೆಚ್ಚಿದೆ. ಕನ್ನಡ, ಇಂಗ್ಲೀಷ್ ಬೋಧನೆಗೆ ಅನ್ಯ ಕಾಲೇಜಿನಿಂದ ವಾರದಲ್ಲಿ ಕೇವಲ ಮೂರು ದಿನ ಮಾತ್ರ ನಿಯೋಜನೆ ಮಾಡಲಾಗಿದೆ. ಸಮಾಜ ವಿಜ್ಞಾನ, ಗಣಿತ ಮತ್ತು ಜೀವಶಾಸ್ತ್ರ ಬೋಧನೆಗೆ ಅತಿಥಿ ಶಿಕ್ಷಕರನ್ನು ನೇಮಕಮಾಡಲಾಗಿದೆ. ಬಾಲಕ ಬಾಲಕಿಯರ ಸಹ ಶಿಕ್ಷಣಕ್ಕೆ ಅವಕಾಶ ಇದ್ದರೂ ಇಲ್ಲಿ ಪ್ರವೇಶ ಪಡೆಯುವುದಕ್ಕೆ ಬಾಲಕಿಯರು ಹಿಂದೇಟು ಹಾಕುತ್ತಿದ್ದು ಅದಕ್ಕೆ ಕಾರಣಗಳನ್ನು ಹುಡುಕಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಕುಷ್ಟಗಿ ಬಾಲಕಿಯರ ಸರ್ಕಾರಿ ಜ್ಯೂನಿಯರ್ ಕಾಲೇಜನ ಶೌಚಾಲಯ ಕಟ್ಟಡ ಅಪೂರ್ಣ ಸ್ಥಿತಿಯಲ್ಲಿರುವುದು
ತಾವರಗೇರಾದಲ್ಲಿನ ಬಾಲಕಿಯರ ಕಾಲೇಜಿನ ಶೌಚಾಲಯ ನೀರಿಲ್ಲದೆ ನಿರುಪಯುಕ್ತವಾಗಿರುವುದು

ಪ್ರಾಚಾರ್ಯರಿಲ್ಲದ ಕಾಲೇಜುಗಳು, ಪ್ರಭಾರಿಗಳದ್ದೇ ದರ್ಬಾರು

ಬಾಲಕರ ಕಾಲೇಜಿಗೆ ಅಗತ್ಯ ರಕ್ಷಣೆ ಇಲ್ಲ ತರಗತಿ ಕೊಠಡಿ ಮುಂದೆಯೇ ಜನ ಮಲಮೂತ್ರ ವಿಸರ್ಜಿಸುತ್ತಿದ್ದಾರೆ. ಕ್ರಮ ಕೈಗೊಳ್ಳುವ ಅಗತ್ಯವಿದೆ
ವೀರೇಶ ಹಿರೇಮಠ ಕುಷ್ಟಗಿ ನಿವಾಸಿ
ಬಾಲಕಿಯರ ಕಾಲೇಜಿನ ಶೌಚಾಲಯ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ಶೇ80 ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ
ಆದೇಶ ಗುಡಿಹಾಳ ನಿರ್ಮಿತಿ ಕೇಂದ್ರದ ಎಂಜಿನಿಯರ್
ಕೋರಿಕೆ ಬಸ್‌ ನಿಲ್ದಾಣವಾಗಿದ್ದರೂ ತಾವರಗೇರಾ ಬಾಲಕರ ಕಾಲೇಜಿನ ಬಳಿ ಸಾರಿಗೆ ಬಸ್‌ಗಳು ನಿಲ್ಲುವುದಿಲ್ಲ. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ
ಬಸವರಾಜ ವಿದ್ಯಾರ್ಥಿ ತಾವರಗೇರಾ ಪಿಯು ಕಾಲೇಜು

ತಾವರಗೇರಾ: ಕಾಲೇಜಿನ ಶೌಚಾಲಯಕ್ಕೆ ನೀರಿನ ಸಮಸ್ಯೆ

ಶರಣಬಸವ ನವಲಹಳ್ಳಿ

ತಾವರಗೇರಾ: ಪಟ್ಟಣದ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸ್ಥಿತಿ ಭಿನ್ನವಾಗಿದೆ. ರಕ್ಷಣೆ ಇಲ್ಲದ ಕಾರಣ ಸಂಜೆಯಾಗುತ್ತಿದ್ದಂತೆ ಮದ್ಯವ್ಯಸನಿಗಳು ಕಿಡಿಕೇಡಿಗಳು ಠಿಕಾಣಿ ಹೂಡುತ್ತಾರೆ. ಸಿಬ್ಬಂದಿಗೆ ಖಾಲಿ ಬಾಟಲಿಗಳನ್ನು ಎತ್ತಿಹಾಕುವ ಅನಿವಾರ್ಯತೆ ಎದುರಾಗಿದೆ. ಬಾಲಕಿಯರ ಕಾಲೇಜಿನಲ್ಲಿ ಶೌಚಾಲಯ ಇದ್ದರೂ ನೀರಿನ ಸಮಸ್ಯೆಯಿಂದ ಬಳಕೆ ಇಲ್ಲದೆ ನಿರುಪಯುಕ್ತವಾಗಿದ್ದು ಬಾಲಕಿಯರು ಪರದಾಡುವಂತಾಗಿದೆ. ಅಲ್ಲದೆ ಹೆಣ್ಣುಮಕ್ಕಳ ಕಾಲೇಜು ಆಗಿದ್ದರೂ ರಕ್ಷಣಗೆ ಆವರಣಗೋಡೆಯೂ ಇಲ್ಲ. ಬಾಲಕರ ಕಾಲೇಜಿಗೆ ಸಾರಿಗೆ ಬಸ್‌ ಕೋರಿಕೆ ನಿಲ್ದಾಣ ಇದ್ದರೂ ಬಹುತೇಕ ಘಟಕಗಳ ಬಸ್‌ಗಳು ನಿಲ್ಲದ ಕಾರಣ ಗ್ರಾಮಾಂತರ ಪ್ರದೇಶದಿಂದ ಬರ ಹೋಗುವ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.