ಕುಷ್ಟಗಿ: ದ್ವಿಚಕ್ರ ವಾಹನಗಳ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕಾರ್ಯಾಚರಣೆ ಕಾಟಾಚಾರಕ್ಕೆ ಎನ್ನುವಂತಾಗಿದ್ದು ಸಾರ್ವಜನಿಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿದ್ದು ಕಂಡುಬಂದಿಲ್ಲ.
ಆ.1 ರಿಂದ ಹೆಲ್ಮೆಟ್ ಕಡ್ಡಾಯ ನಿಯಮ ವಾರದ ಮೊದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್.ಅರಸಿದ್ದಿ ಅವರು ನೀಡಿದ್ದ ಸೂಚನೆ ವ್ಯಾಪಕ ಪ್ರಚಾರ ಪಡೆದಿತ್ತು. ನಿಯಮ ಮೀರಿದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿತ್ತು. ಅದರಂತೆ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಎರಡು ದಿನ ಎರಡು ಸ್ಥಳಗಳಲ್ಲಿ ಕಾರ್ಯಾಚರಣೆಗಳಿದ ಪೊಲೀಸರು ಹೆಲ್ಮೆಟ್ ಧರಿಸದವರಿಂದ ₹500 ದಂಡ ವಸೂಲಿ ಮಾಡಿದ್ದರು.
ಮೊದಲ ದಿನ ಪೊಲೀಸ್ ಠಾಣೆಯ ಬಳಿ ಸ್ವತಃ ಸಿಪಿಐ ಯಶವಂತ ಬಿಸನಳ್ಳಿ ಅವರ ನೇತೃತ್ವದಲ್ಲಿ ದಂಡ ಪ್ರಕ್ರಿಯೆ ನಡೆಸಿದರೆ ಆ.2 ರಂದು ಬಸ್ ನಿಲ್ದಾಣದ ರಸ್ತೆ ಬಳಿ ನಿಂತು ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ್ದರು. ಆದರೆ ಪೊಲೀಸರ ಕಟ್ಟುನಿಟ್ಟಿನ ಕ್ರಮ ಕೇವಲ ಎರಡು ದಿನಕ್ಕೆ ಸೀಮಿತಗೊಂಡಿದ್ದು ಶನಿವಾರ ಪಟ್ಟಣದಲ್ಲಿ ಅಂಥ ಯಾವುದೇ ಕ್ರಮ ಜರುಗಿಸಿದ್ದು ಕಂಡುಬರಲಿಲ್ಲ. ಕೆಲವೇ ಬೈಕ್ ಸವಾರರು ಮಾತ್ರ ಹೆಲ್ಮೆಟ್ ಹಾಕಿಕೊಂಡಿದ್ದನ್ನು ಬಿಟ್ಟರೆ ಉಳಿದವರು ತಮಗೆ ಯಾವುದೇ ನಿಯಮ ಅನ್ವಯಿಸುವುದಿಲ್ಲವೇನೊ ಎಂಬಂತೆ ಎಂದಿನಂತೆ ಸಹಜವಾಗಿ ಸಂಚರಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಕಡೆಗಣನೆ: ‘ನಿಮ್ಮ ಸುರಕ್ಷತೆ ಸಲುವಾಗಿಯೇ ಹೆಲ್ಮೆಟ್ ಹಾಕಿಕೊಳ್ಳಬೇಕು ಅದರಿಂದ ನಿಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಿದಂತಾಗುತ್ತದೆ’ ಎಂದು ಪೊಲೀಸರು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರಾದರೂ ಈ ವಿಚಾರದಲ್ಲಿ ತಾಲ್ಲೂಕಿನ ಜನರು ಪೊಲೀಸ್ ಇಲಾಖೆ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೊತ್ತಾಗಿದೆ.
ಮೇಲಧಿಕಾರಿಗಳ ಸೂಚನೆಯಂತೆ ಕಾಟಾಚಾರಕ್ಕೆ ಎರಡು ದಿನ ಕಾರ್ಯಾಚರಣೆ ನಡೆಸಿದ ಪೊಲೀಸರೂ ನಂತರ ಅದರ ಬಗ್ಗೆ ಗಮನಹರಿಸಿಲ್ಲ. ಕೆಲವರಿಗೆ ಮಾತ್ರ ದುಬಾರಿ ದಂಡ ವಿಧಿಸುವ ಮೂಲಕ ತಾರತಮ್ಯ ನೀತಿ ಅನುಸರಿಸಿದರು. ಪ್ರಭಾವಿಗಳು ಕಣ್ಮುಂದೆಯೇ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ವರ್ಷಗಳ ಹಿಂದೆಯೂ ಇದೇ ರೀತಿ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು ಬಹಳಷ್ಟು ಪರಿಣಾಮ ಬೀರಿತ್ತು. ನಂತರ ಪುನಃ ಜನ ಪೊಲೀಸರ ಸೂಚನೆಯನ್ನು ಕಡೆಗಣಿಸಿದ್ದರು. ಈಗ ಜಿಲ್ಲೆಗೆ ಹೊಸದಾಗಿ ಪೊಲೀಸ್ ವರಿಷ್ಠಾಧಿಕಾರಿ ಬಂದ ನಂತರ ಮತ್ತೆ ಅಂಥ ಕ್ರಮಕ್ಕೆ ಮುಂದಾಗಿದ್ದಾರೆ. ಕೆಲ ದಿನ ಮಾತ್ರ ಅದರ ಕಾವು ಇರುತ್ತದೆ. ನಂತರ ಹತ್ತರಲ್ಲಿ ಹನ್ನೊಂದು ಎಂಬಂತೆ ಹೆಲ್ಮೆಟ್ ವಿಚಾರ ನೇಪಥ್ಯಕ್ಕೆ ಸರಿಯುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಜವಾಬ್ದಾರಿ ಇರಬೇಕು: ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕೆಲಸ, ನಾಗರಿಕರು ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ಅವಿದ್ಯಾವಂತರಿಗಿಂತ ವಿದ್ಯಾವಂತರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ದಂಡ ವಿಧಿಸುವ ಪ್ರಕ್ರಿಯೆ ಸಾಂಕೇತಿಕ ಎಂಬುದನ್ನು ಜನರು ಅರಿತು ಎಚ್ಚರಗೊಳ್ಳಬೇಕಾಗುತ್ತದೆ. ಆದರೆ ಲೆಕ್ಕವಿಲ್ಲದಷ್ಟು ಬೈಕ್‌ಗಳಿವೆ, ಕೆಲವೇ ಜನ ಪೊಲೀಸರು ಇಡಿ ಜನಸಮೂಹದ ಮೇಲೆ ಕ್ರಮ ಜರುಗಿಸಿ ದಂಡ ವಿಧಿಸಲು ಸಾಧ್ಯವೆ, ಜನರಲ್ಲೂ ಜಾಗೃತಿ ಇರಬೇಕಲ್ಲವೆ? ಎನ್ನುತ್ತಾರೆ ಪಟ್ಟಣದ ಪೊಲೀಸ್ ಸಿಬ್ಬಂದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.