ADVERTISEMENT

ಗಾಣದಾಳ ಗ್ರಾಮಕ್ಕೆ ಸೌಲಭ್ಯಗಳ ಬರ

ಯಲಬುರ್ಗಾ ತಾಲ್ಲೂಕಿನ ಗಡಿ ಗ್ರಾಮದಲ್ಲಿ ಮೂಲಸೌಕರ್ಯ ಮರೀಚಿಕೆ

ಉಮಾಶಂಕರ ಬ.ಹಿರೇಮಠ
Published 20 ಅಕ್ಟೋಬರ್ 2023, 4:56 IST
Last Updated 20 ಅಕ್ಟೋಬರ್ 2023, 4:56 IST
ಯಲಬುರ್ಗಾ ತಾಲ್ಲೂಕು ಗಾಣದಾಳ ಗ್ರಾಮದಲ್ಲಿನ ಪ್ರಮುಖ ರಸ್ತೆಯ ಮಧ್ಯೆ ದಿನಬಳಕೆಯ ನೀರು ಸಂಗ್ರಹಗೊಂಡು ಕೊಳಚೆನೀರಿನ ಹೊಂಡದಂತಾಗಿದೆ
ಯಲಬುರ್ಗಾ ತಾಲ್ಲೂಕು ಗಾಣದಾಳ ಗ್ರಾಮದಲ್ಲಿನ ಪ್ರಮುಖ ರಸ್ತೆಯ ಮಧ್ಯೆ ದಿನಬಳಕೆಯ ನೀರು ಸಂಗ್ರಹಗೊಂಡು ಕೊಳಚೆನೀರಿನ ಹೊಂಡದಂತಾಗಿದೆ   

ಯಲಬುರ್ಗಾ: ತಾಲ್ಲೂಕಿನ ಗಡಿಯಲ್ಲಿರುವ ಗಾಣದಾಳ ಗ್ರಾಮ ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಜನಪ್ರತಿನಿಧಿಗಳು ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿಯೇ ಹೆಚ್ಚಾಗಿ ಈ ಪ್ರದೇಶಕ್ಕೆ ಭೇಟಿ ಕೊಡುತ್ತಾರೆ. ಈ ಪ್ರದೇಶದ ಅಭಿವೃದ್ಧಿಗೆ ಯಾವುದೇ ಕಾಳಜಿ ತೋರದೇ ಇರುವುದರಿಂದ ಉತ್ತಮ ರಸ್ತೆ, ಚರಂಡಿ ಹಾಗೂ ಇನ್ನಿತರ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಗ್ರಾಮದಲ್ಲಿ ದಿನಬಳಕೆಯ ನೀರು ರಸ್ತೆಯ ಮೇಲೆ ಹರಿದು ತಗ್ಗು ಪ್ರದೇಶದಲ್ಲಿ ನಿಲ್ಲುವುದು ಸಾಮಾನ್ಯ. ದೊಡ್ಡ ಹೊಂಡದಂತಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾದಂತಿವೆ. ದುರ್ವಾಸನೆಯೊಂದಿಗೆ ನಿತ್ಯ ಜೀವನ ಕಳೆಯುವುದು ಗ್ರಾಮಸ್ಥರ ದೌಭಾಗ್ಯವೇ ಸರಿ. ಇದರಿಂದಾಗಿ ಗ್ರಾಮಸ್ಥರ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರುತ್ತಿದೆ.

ಪಂಚಾಯಿತಿ ಕೇಂದ್ರ ಹೊಂದಿರುವ ಗಾಣದಾಳ ಗ್ರಾಮದಲ್ಲಿ ಮುಖ್ಯವಾಗಿ ಸಮರ್ಪಕ ಹಾಗೂ ಉತ್ತಮವಾದ ಚರಂಡಿಗಳಿಲ್ಲ, ಅಲ್ಲಲ್ಲಿ ಇದ್ದ ಚರಂಡಿಗಳು ಅವೈಜ್ಞಾನಿಕವಾಗಿವೆ. ಸರಳವಾಗಿ ಹರಿದು ಹೋಗದೇ ನಿಂತಲ್ಲೇ ನಿಂತು ದುರ್ನಾತ ಬೀರುತ್ತಿವೆ. ರಸ್ತೆಯ ಬದಿಯಲ್ಲಿಯೇ ತಿಪ್ಪೆಗಳು ಸಾಲುಗಟ್ಟಿವೆ.

ADVERTISEMENT

‘ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಯಾಗಲಿ ಗ್ರಾಮದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ಈ ದುರವಸ್ಥೆಗೆ ಕಾರಣವಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಅಪರೂಪಕ್ಕೂ ಗ್ರಾಮಕ್ಕೆ ಭೇಟಿ ನೀಡುವುದಿಲ್ಲ,ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಹರಿದುಬಂದರೂ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಇದರಿಂದ ಗ್ರಾಮವು ದಿನದಿಂದ ದಿನಕ್ಕೆ ಕೊಳಗೇರಿಯಂತಾಗುತ್ತಿದೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರಮುಖ ರಸ್ತೆ ಮಧ್ಯೆ ಉಂಟಾದ ದೊಡ್ಡ ತಗ್ಗಿನಲ್ಲಿ ನೀರು ನಿಲ್ಲುವುದರಿಂದ ಮಕ್ಕಳು ಮತ್ತು ವೃದ್ಧರು ಈ ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ. ಕೊಳಚೆ ನೀರಲ್ಲಿ ಕಾಲಿಟ್ಟು ಹೋಗಬೇಕಾದ ಅನಿರ್ವಾಯತೆ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಈ ಹೊಂಡದಂತಿರುವ ಕೊಳಚೆ ನೀರಿನಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದ ಉದಾಹರಣೆಗಳು ಸಾಕಷ್ಟಿವೆ’ ಎಂದು ಗ್ರಾಮದ ಯಮನೂರ ಗುಡಿಸಲಮನಿ ಹೇಳಿದರು. 

ಗ್ರಾಮದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ರಸ್ತೆಯಲ್ಲಿ ಹೊಂಡದಂತಿರುವ ತಗ್ಗು ಪ್ರದೇಶವನ್ನು ಮುಚ್ಚಿ ನೀರು ನಿಲ್ಲದಂತೆ ಮಾಡುವುದು, ಕೊಳಚೆ ನೀರು ನಿಲ್ಲದೇ ಸರಳವಾಗಿ ಮುಂದಕ್ಕೆ ಹರಿದುಹೋಗುವಂತೆ ಕ್ರಮಕೈಗೊಳ್ಳುವುದು, ವಿವಿಧ ಓಣಿಯಲ್ಲಿ ಸಿಮೆಂಟ್ ರಸ್ತೆ ಹಾಗೂ ಅಗತ್ಯವಿರುವ ಕಡೆ ಚರಂಡಿ ನಿರ್ಮಿಸುವುದು ಸೇರಿ ಇನ್ನಿತರ ಅಗತ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೆಜೆಎಂ ಕಾಮಗಾರಿಯ ಪೈಪ್ ಒಡೆದು ನಿತ್ಯ ನೀರು ಹರಿದು ಬರುತ್ತಿದೆ. ಕೂಡಲೇ ಸ್ವಚ್ಛತೆ ಕಾಪಾಡುವಂತೆ ಪಿಡಿಒಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ

–ಅಮರೇಶ ಪೊಲೀಸ್‍ಗೌಡ ಗ್ರಾಮದ ಮುಖಂಡ

ಶಾಲೆ ಮತ್ತು ಅಂಗನವಾಡಿ ಕೇಂದ್ರದ ಆವರಣದಲ್ಲಿ ನೀರು ಹರಿಯುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಪರಿಹಾರ ಕ್ರಮಕ್ಕೆ ಮುಂದಾಗಬೇಕು. –ಹನಮೇಶ ನಾಗರಾಳ ಗ್ರಾಮಸ್ಥ

15ನೇ ಹಣಕಾಸು ಯೋಜನೆ ಅಡಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ದಿನಬಳಕೆ ನೀರು ಹರಿದು ಹೊರಹೋಗುವಂತೆ ಮಾಡಲಾಗುವುದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು.

–ಶರಣಗೌಡ‌ ಪೊಲೀಸ್ ಪಾಟೀಲ್. ಪಿಡಿಒ ಗಾಣದಾಳ ಪಂಚಾಯತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.