ಯಲಬುರ್ಗಾ: ಈ ವರ್ಷದ ಮುಂಗಾರಿನ ಆರಂಭದಲ್ಲಿ ಸುರಿದ ಅಲ್ಪ ಮಳೆ ರೈತರಲ್ಲಿ ಮೂಡಿಸಿದ ಮಂದಹಾಸ ಬಹುಕಾಲ ಉಳಿಯಲಿಲ್ಲ, ನಂತರದಲ್ಲಿ ಸಕಾಲದಲ್ಲಿ ಮಳೆ ಸುರಿಯದ ಕಾರಣ ಮತ್ತೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಈ ಹಿನ್ನೆಲೆಯಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕು ಕೇಂದ್ರಗಳನ್ನು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹಾಗೆಯೇ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ತಂಡವು ವಾಸ್ತವಾಂಶದ ಮಾಹಿತಿ ಸಂಗ್ರಹಿಸಿಕೊಂಡು ಹೋಗಿದೆ.
ಮುಂಗಾರು ಫಸಲು ಕೈಗೆ ಬರುವಷ್ಟರಲ್ಲಿಯೇ ಬೆಳೆ ಬಾಡಿಹೋಗಿ ನಷ್ಟಕ್ಕೆ ಒಳಗಾಗಿದ್ದು ಒಂದೆಡೆಯಾದರೆ, ಹಿಂಗಾರು ಕೂಡ ಮಳೆಯ ಅಭಾವದಿಂದ ಬಹುತೇಕ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ, ಆದರೆ ಕೆಲವೊಂದು ಪ್ರದೇಶದಲ್ಲಿ ಧೈರ್ಯ ಮಾಡಿ ಬಿತ್ತಿದ ಬೆಳೆಯು ಸರಿಯಾಗಿ ಮೊಳಕೆಯೊಡಯದೇ ನಿರಾಶೆ ಮೂಡಿಸಿದೆ. ಆದರೆ ಬಹುತೇಕ ಪ್ರದೇಶದಲ್ಲಿ ಹಿಂಗಾರು ಬಿತ್ತನೆಗೆ ಮುಂದಾಗದೇ ಇರುವುದು ಕಂಡು ಬಂದಿದೆ.
ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಯಲಬುರ್ಗಾ ತಾಲ್ಲೂಕಿನಲ್ಲಿ 51,422 ಹೆಕ್ಟೇರ್, ಕುಕನೂರು ತಾಲ್ಲೂಕಿನಲ್ಲಿ 24,701 ಹೆಕ್ಟೇರ್ ಸೇರಿ ಒಟ್ಟು 80,778 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲಾಗಿತ್ತು. ಶೇ. 94 ಅಂದರೆ 76,123 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ತೇವಾಂಶದ ಕೊರತೆಯಿಂದ ಒಣಗಿ ಹೋಗಿದೆ.
ಮುಖ್ಯವಾಗಿ ಜೋಳ, ಮೆಕ್ಕೆಜೋಳ, ಸಜ್ಜಿ, ನವಣಿ, ತೊಗರಿ, ಹೆಸರು, ಅಲಸಂದಿ, ಶೇಂಗಾ, ಸೂರ್ಯಕಾಂತಿ, ಹತ್ತಿ ಮೊದಲಾದ ಬೆಳೆಗಳು ಫಸಲು ಕೊಡುವ ಮುನ್ನ ಬಾಡಿ ನಷ್ಟಕ್ಕೆ ಕಾರಣವಾಗಿವೆ. ಹಿಂಗಾರು ಕೂಡ ಶೇ 42 ಅಂದರೆ 30,960 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಅಲ್ಲದೇ ಮಳೆ ಬೀಳದ ಕಾರಣ ಹೆಚ್ಚಿನ ರೈತರು ಬಿತ್ತನೆಗೆ ಮುಂದಾಗದೇ ತಟಸ್ಥರಾಗಿದ್ದಾರೆ. ಇದರಿಂದಾಗಿ ಹಿಂಗಾರು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಸುಧಾರಣೆ ಕಂಡು ಬರುತ್ತಿಲ್ಲ.
ಪ್ರಸಕ್ತ ವರ್ಷದಲ್ಲಿ ಯಲಬುರ್ಗಾ ತಾಲ್ಲೂಕಿನಲ್ಲಿ ವಾಡಿಕೆ ಮಳೆ 45.36 ಸೆಂ.ಮೀ. ಬೀಳಬೇಕಿತ್ತು. ಕೇವಲ 28.91 ಸೆಂ.ಮೀ. ಮಾತ್ರ ಸುರಿದಿದ್ದು, ಶೇ. 36ರಷ್ಟು ಕೊರತೆ ಉಂಟಾಗಿದೆ. ಕುಕನೂರು ತಾಲ್ಲೂಕಿನಲ್ಲಿ ಬೀಳಬೇಕಿದ್ದ 51.98 ಸೆಂ.ಮೀ. ವಾಡಿಕೆ ಮಳೆ 31.05 ಸೆಂ.ಮೀ. ಮಾತ್ರ ಬಂದಿದ್ದು, ಕೊರತೆಯ ಪ್ರಮಾಣ ಶೇ. 40ರಷ್ಟ ಇದೆ.
‘ಮಳೆ ಆಕೈತಿ ಅಂತ ಬಿತ್ತಿದ್ವೀ. ತೇವಾಂಶ ಇರೋತನ್ಕಾ ಚನ್ನಾಗಿಯೇ ಎದಿಉದ್ದ ಬೆಳೆದು ನಿಂತವು. ಮೆಕ್ಕೆಜೋಳಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕ್ರಿ, ಆದ್ರ ಮಳಿನಾ ಆಗಲ್ಲಿಲ್ಲರಿ ಬೆಳಿ ಒಣಗೈತ್ರಿ, ಶೇಂಗಾ ಕೂಡಾ ಕಾಯಿ ಬಿಡೊ ಹೊತ್ತಿಗೆ ಎಲೆ ಒಣಗಿ ಆಮೇಲೆ ಪೂರ್ಣ ಬಳ್ಳಿ ಬಾಡೈತ್ರಿ’ ಎಂದು ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ರೈತರ ಕಳಕಪ್ಪ ಎಂ. ತೊದಲರ ಅವರು ಹೇಳುವಾಗ ಗಂಟಲು ಒಣಗಿದಂತಾಗಿತ್ತು
ಹೋದ ವರ್ಷ ಒಳ್ಳೆ ಮಳೆಯಾಗಿತ್ತು ಚಲೋ ಬೆಳೆ ಬಂದಿತ್ತು ಈ ವರ್ಷನೂ ಮಳೆ ಸರಿಯಾಗಿ ಬೀಳಬಹುದೆಂಬ ಆಸೆಯಿಂದ ದುಬಾರಿ ಮೆಕ್ಕೆಜೋಳ ಬೀಜ ಖರೀದಿಸಿ ಬಿತ್ತಿದ್ವೀ... ಆದ್ರೆ ಮಾರುದ್ದ ಬೆಳೆದು ನಿಂತಿದ್ದ ಬೆಳೆ ದಿನದಿಂದ ದಿನಕ್ಕೆ ಬಾಡಿ ಹೋಯ್ತಿರ್ರಿ ಮನಸ್ಸಿಗೆ ಬಾಳ ನೋವು ಆಗೈತ್ರಿ. ಸರ್ಕಾರ ಕೂಡಲೇ ನೆರವು ನೀಡಿದರೆ ಜೀವನಕ್ಕೆ ಒಂದು ದಾರಿ ಆಕೈತ್ರಿ.- ಕಾಂತಪ್ಪ ಕೌಡ್ಕಿ ತರಲಕಟ್ಟಿ ಗ್ರಾಮದ ರೈತ
ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ವ್ಯತ್ಯಾಸದಿಂದಾಗಿ ರೈತರಿಗೆ ಇಲಾಖೆಯ ವತಿಯಿಂದ ಸಲಹೆ ನೀಡಲಾಗುತ್ತಿದೆ. ಆದರೂ ಕೆಲ ರೈತರು ಬಿತ್ತನೆಗೆ ಮುಂದಾಗುತ್ತಾರೆ. ಇದರಿಂದ ಬೆಳೆಯ ನಾಶಕ್ಕೆ ಕಾರಣವಾಗುತ್ತದೆ.-ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ ಯಲಬುರ್ಗಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.