ADVERTISEMENT

ಯಲಬುರ್ಗಾ: ಸಾರಿಗೆ, ಉಪನ್ಯಾಸಕರ ಕೊರತೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 6:06 IST
Last Updated 4 ಜುಲೈ 2024, 6:06 IST
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆಗೆ ಸಿದ್ದಗೊಂಡಿದೆ
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆಗೆ ಸಿದ್ದಗೊಂಡಿದೆ   

ಯಲಬುರ್ಗಾ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪದವಿಪೂರ್ವ ಕಾಲೇಜು ಹೊಂದಿರುವ ತಾಲ್ಲೂಕು ಎಂಬ ಹಿರಿಮೆಗೆ ಪಾತ್ರವಾಗಿರುವ ಯಲಬುರ್ಗಾ ತಾಲ್ಲೂಕಿನಲ್ಲಿ ಬರೋಬ್ಬರಿ 12 ಕಾಲೇಜುಗಳಿವೆ. ತಾಲ್ಲೂಕು ಕೇಂದ್ರದಲ್ಲೇ ಎರಡು ಕಾಲೇಜುಗಳಿವೆ. ಅಲ್ಲದೇ ಕೇವಲ 7-11 ಕಿ.ಮೀ ಅಂತರದಲ್ಲಿ 6 ಕಾಲೇಜುಗಳು ಅಸ್ತಿತ್ವದಲ್ಲಿವೆ.

1800ರಿಂದ 2000 ವಿದ್ಯಾರ್ಥಿಗಳು ಪ್ರವೇಶಪಡೆದಿದ್ದು, ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಜೊತೆ ಅತಿಥಿ ಉಪನ್ಯಾಸಕರೇ ಬೋಧನೆ ಮುಂದುವರೆದಿದೆ.

ಕಳೆದ ಎರಡ್ಮೂರು ವರ್ಷಗಳ ಅಂತರದಲ್ಲಿ ಯಲಬುರ್ಗಾ ಬಾಲಕಿಯರ ಕಾಲೇಜು ಸೇರಿ ಗುನ್ನಾಳ ಮತ್ತು ಮುಧೋಳ ಗ್ರಾಮದಲ್ಲಿ ಕಾಲೇಜುಗಳು ಪ್ರಾರಂಭಗೊಂಡಿವೆ. ಕೆಲವೊಂದು ಕಾಲೇಜು ಹೊರತುಪಡಿಸಿದರೆ ಬಹುತೇಕ ಕಡೆ ಅಗತ್ಯ ಸೌಲಭ್ಯಗಳಿವೆ, ಆದರೆ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿವೆ. ಶೌಚಾಲಯಗಳ ನಿರ್ವಹಣೆ ಕೊರತೆಯ ಪರಿಣಾಮ ಹೆಣ್ಣುಮಕ್ಕಳು ತೊಂದರೆ ಎದುರಿಸುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಕಾಲೇಜು ತೆರೆದಿದ್ದರಿಂದ ಬಡ, ಗ್ರಾಮೀಣ, ಹೆಣ್ಣು ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ.  ಪರಿಣಾಮಕಾರಿ ಬೋಧನೆಗೆ ಕ್ರಮಕೈಗೊಳ್ಳುವುದು ಅಷ್ಟೇ ಮುಖ್ಯ’ ಎಂದು ಕುಡಗುಂಟಿಯ ಬಸವರಾಜ ಬೊಮ್ಮನಾಳ ಹೇಳಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಬಸ್ ಸೌಲಭ್ಯಗಳಿಲ್ಲದಿರುವುದು ತೊಂದರೆಯಾಗುತ್ತಿದೆ. ವಣಗೇರಿ, ಹುಣಸಿಹಾಳ, ಕೊನಸಾಗರ ವಿದ್ಯಾರ್ಥಿಗಳು ಕೆಲವೊಮ್ಮೆ ಬೇವೂರು ಕಾಲೇಜಿಗೆ ನಡೆದುಕೊಂಡು ಹೋಗಿ ಬರುವುದು ಸಾಮಾನ್ಯವಾಗಿದೆ. ಹಿರೇವಂಕಲಕುಂಟಾ ಭಾಗದಲ್ಲೂ ಇದೇ ಸಮಸ್ಯೆ ಎದ್ದುಕಾಣುತ್ತಿದೆ.

ಯಲಬುರ್ಗಾ ಸುತ್ತಮುತ್ತಲಿನ 7–8 ಕಿ.ಮೀ. ಅಂತರದಲ್ಲಿಯೇ ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿ ಕಾಲೇಜುಗಳಿವೆ. ಅಲ್ಲದೇ ಇದೇ ವರ್ಷದಿಂದ 6 ಕಿ.ಮೀ ಅಂತರದ ಮುಧೋಳದಲ್ಲಿಯೂ ಪ್ರಾರಂಭವಾಗಿದೆ. 15 ಕಿ.ಮಿ. ಅಂತರದಲ್ಲಿ ಬಂಡಿ, ಬಳೂಟಗಿ, ಬೇವೂರು ಗ್ರಾಮದಲ್ಲಿ ಕಾಲೇಜು ಪ್ರಾರಂಭಗೊಂಡಿದ್ದರಿಂದ ಯಲಬುರ್ಗಾ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯ ಕಡಿಮೆಯಾಗುತ್ತಿದೆ.

ಕಳೆದ 7 ವರ್ಷಗಳ ಹಿಂದೆಯೇ ಹುದ್ದೆ ಸಮೇತ ಕಾಲೇಜು ಮಂಜೂರಾಗದೇ ಇರುವ ಕಾರಣ ಗಾಣದಾಳ ಮತ್ತು ಚಿಕ್ಕಮ್ಯಾಗೇರಿ ಕಾಲೇಜಿಗೆ ಇನ್ನೂವರೆಗೆ ಕಾಯಂ ಪ್ರಾಚಾರ್ಯರಿಲ್ಲ, ಬೋಧಕರಿಲ್ಲ. ಚಿಕ್ಕಮ್ಯಾಗೇರಿಯಲ್ಲಿ ಕಾಲೇಜು ಕಟ್ಟಡ ಸಿದ್ದಗೊಂಡಿದೆ ಉದ್ಘಾಟನೆಗೊಳ್ಳಬೇಕಾಗಿದೆ. ಕ್ರೀಡಾಪಟುಗಳ ಉತ್ತೇಜನಕ್ಕೆ ಕ್ರೀಡಾಂಗಣ ಅಭಿವೃದ್ಧಿ ಮತ್ತು ಪರಿಕರಗಳನ್ನು ಒದಗಿಸುವುದು, ವಿದ್ಯಾರ್ಥಿಸ್ನೇಹಿ ಗ್ರಂಥಾಲಯಗಳನ್ನಾಗಿ ಅಭಿವೃದ್ಧಿಗೊಳಿಸುವುದು ಮುಖ್ಯವಾಗಿದ್ದು, ಈ ಮೂಲಕ ಶೈಕ್ಷಣಿಕ ಸುಧಾರಣೆಗೆ ಮುಂದಾಗಬೇಕು ಎಂಬುದು ಪಾಲಕರ ಆಗ್ರಹ.

ಯಲಬುರ್ಗಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಾತ್ರ ಕಾಯಂ ಪ್ರಾಚಾರ್ಯರಿದ್ದು, ಉಳಿದಂತೆ ಹಿರಿಯ ಉಪನ್ಯಾಸಕರೇ ಪ್ರಭಾರ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೊಂದು ಕಡೆ ಒಬ್ಬರೇ ಎರಡು ಕಾಲೇಜುಗಳ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ.

ಗಾಣದಾಳ ಮತ್ತು ಚಿಕ್ಕಮ್ಯಾಗೇರಿ ಕಾಲೇಜಿನಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲದೇ ಅತಿಥಿ ಉಪನ್ಯಾಸಕರೇ ನಿರ್ವಹಿಸುವ ಸ್ಥಿತಿಯಿದೆ. ವಾರದಲ್ಲಿ ಮೂರು ದಿನ ಮಾತ್ರ ಕಾಯಂ ಉಪನ್ಯಾಸಕರು ಪ್ರಭಾರ ಪ್ರಾಚಾರ್ಯರಾಗಿ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ತಾಲ್ಲೂಕಿನಲ್ಲಿ 25ಕ್ಕೂ ಅಧಿಕ ಸಂಖ್ಯೆಯ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು ಕೂಡಲೇ ಭರ್ತಿಯಾಗಬೇಕಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪ್ರಾಚಾರ್ಯರೊಬ್ಬರು.

ಯಲಬುರ್ಗಾ ತಾಲ್ಲೂಕು ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ
ಮುಧೋಳದಲ್ಲಿ ಇದೇ ವರ್ಷ ಪ್ರಾರಂಭಗಾಣದಾಳ, ಚಿಕ್ಕಮ್ಯಾಗೇರಿ ಕಾಲೇಜಿಗೆ ಹುದ್ದೆ ಮಂಜೂರಿಲ್ಲ
ಯಲಬುರ್ಗಾ ಪಿಯು ಕಾಲೇಜಿನಲ್ಲಿ ಮಾತ್ರ ವಿಜ್ಞಾನ ವಿಭಾಗವಿದ್ದು ಉಳಿದ ಕಾಲೇಜುಗಳಲ್ಲೂ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಪ್ರಾರಂಭಿಸಬೇಕು. ಕೊರತೆ ನೀಗಿಸಲು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಸರ್ಕಾರ ಮನಸ್ಸು ಮಾಡಬೇಕು. ಉಪನ್ಯಾಸಕರು ಸಾರಿಗೆ ಸೌಲಭ್ಯ ಸೇರಿ ಇತರ ಅನುಕೂಲ ಕಲ್ಪಿಸಿಕೊಡುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು
ಮಲ್ಲನಗೌಡ ಕೋನನಗೌಡ ಜೆಡಿಎಸ್ ಮುಖಂಡ ಬೇವೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.