ADVERTISEMENT

ಮುನಿರಾಬಾದ್: ಭಕ್ತರಿಗೆ ನೀರಿನ ಕೊರತೆಯೇ ಹೊರೆ

ಭರತ ಹುಣ್ಣಿಮೆ; ದೀಡ್ ನಮಸ್ಕಾರ ಹಾಕಲೂ ನೀರಿಲ್ಲ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 4:36 IST
Last Updated 23 ಫೆಬ್ರುವರಿ 2024, 4:36 IST
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ಭಕ್ತರು ದೀಡ ನಮಸ್ಕಾರ ಹಾಕುತ್ತಿರುವುದು
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ಭಕ್ತರು ದೀಡ ನಮಸ್ಕಾರ ಹಾಕುತ್ತಿರುವುದು   

ಮುನಿರಾಬಾದ್: ಭರತ ಹುಣ್ಣಿಮೆಯ ಅಂಗವಾಗಿ (ಫೆ.24) ಶನಿವಾರ ಹುಲಿಗೆಮ್ಮ ದೇವಿ ಕ್ಷೇತ್ರಕ್ಕೆ ಲಕ್ಷಾಂತರ ಜನ ಭಕ್ತರು ಬರುವ ನಿರೀಕ್ಷೆ ಇದೆ, ಆದರೆ ನದಿಯಲ್ಲಿ ನೀರಿನ ಕೊರತೆ ಭಕ್ತರಿಗೆ ಪರೀಕ್ಷೆ ಒಡ್ಡಿದೆ.

ಉತ್ತರ ಕರ್ನಾಟಕ ಭಾಗದ ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದಿಂದ ಕೂಡಾ ಮೂರ್ನಾಲ್ಕು ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ದೇವಿಯ ದರ್ಶನಕ್ಕೆ ಸಾಲಾಗಿ ನಿಲ್ಲುವ ಭಕ್ತರಿಗಾಗಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಮಳೆ ಕೊರತೆಯ ಕಾರಣ ಈ ಬಾರಿ ತುಂಗಭದ್ರಾ ಜಲಾಶಯ ತುಂಬಲಿಲ್ಲ, ನದಿ ಹರಿಯಲಿಲ್ಲ. ದೇವಸ್ಥಾನದ ಹತ್ತಿರ ಇರುವ ಅಲ್ಪಸ್ವಲ್ಪ ನೀರು ಖಾಲಿಯಾಗಿದೆ.

ಭಕ್ತಿಗೆ ಬರವಿಲ್ಲ: ನಾಡಿನಲ್ಲಿ ಬರಗಾಲವಿದ್ದು, ಜನರ ಶ್ರದ್ಧೆ, ಭಕ್ತಿಗೆ ಮಾತ್ರ ಕೊರತೆ ಇಲ್ಲ. ರಾಜ್ಯದ ವಿವಿಧ ಜಿಲ್ಲೆ, ಪಕ್ಕದ ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಬರುವ ಭಕ್ತರು ನದಿ ಸ್ನಾನ ಮಾಡಲು ಹಾತೊರೆಯುತ್ತಾರೆ. ಆದರೆ ಈ ಬಾರಿ ಪಾದ ಕೂಡ ಹಸಿಯಾಗುವಷ್ಟು ನೀರು ನದಿಯಲ್ಲಿ ಇಲ್ಲ.

ADVERTISEMENT

ಹುಣ್ಣಿಮೆ ಅಂಗವಾಗಿ ಕುಟುಂಬ ಸಮೇತ ಬರುವ ಭಕ್ತರು ತಾವು ತಂಗಿದ ಸ್ಥಳದಲ್ಲಿ ಅಡುಗೆ ಮಾಡಿ, ದೇವಿಗೆ ನೈವೇದ್ಯ ಅರ್ಪಿಸುವ ಪರಿಪಾಠವಿದೆ. ಆದರೆ ಈ ಬಾರಿ ಪರಿಸ್ಥಿತಿ ಅಯೋಮಯ.

ದೀಡ್ ನಮಸ್ಕಾರಕ್ಕೆ ನೀರಿಲ್ಲ: ಹರಕೆ ಹೊತ್ತ ಭಕ್ತರು ತುಂಗಭದ್ರಾ ನದಿಯಿಂದ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕುವಾಗ ದಾರಿ ಉದ್ದಕ್ಕೂ ಕೊಡ ಅಥವಾ ಬಿಂದಿಗೆಯಿಂದ ನೀರು ಹಾಕಬೇಕು. ಆದರೆ ಭಕ್ತರು ಸಣ್ಣ ಚೊಂಬಿನಲ್ಲಿ ನೀರು ತೆಗೆದುಕೊಂಡು ವೀಳ್ಯದೆಲೆಯಿಂದ ಹನಿಹನಿ ನೀರು ಹಾಕುವ ದೃಶ್ಯ ಕಂಡು ಬರುತ್ತಿದೆ.

ಶೌಚಾಲಯ, ಬಸ್ ನಿಲ್ದಾಣ ಇಲ್ಲ: ದರ್ಶನಕ್ಕೆ ಬರುವ ಭಕ್ತರು ಬಸ್ ನಿಲ್ದಾಣ ಇಲ್ಲದೆ ಅಂಗಡಿ ಮುಂಗಟ್ಟುಗಳ ಮುಂದೆ ನಿಲ್ಲುತ್ತಾರೆ. ಅಂಗಡಿಕಾರರ ‘ಮುಂದೆ ಹೋಗಿ’ ಎಂಬ ಬೈಗುಳ ಸಾಮಾನ್ಯ. ಇನ್ನು ಸಾರ್ವಜನಿಕ ಶೌಚಾಲಯವಿಲ್ಲದೆ ಭಕ್ತರು ಅದರಲ್ಲೂ ಮಹಿಳೆಯರ ಪರದಾಟ ಹೇಳತೀರದು. ರಸ್ತೆ ಬದಿ, ದೇವಸ್ಥಾನ ಆವರಣ, ನದಿ ದಂಡೆಯಲ್ಲಿ ಬಾಧೆ ತೀರಿಸಿಕೊಳ್ಳುವುದು ಸಾಮಾನ್ಯ. ರೈಲು ಮತ್ತು ಬಸ್ ನಿಲ್ದಾಣ ಬಳಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಿದರೆ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮದ ವರ್ತಕ ವೆಂಕಟೇಶ ವಾಸೆ.

ದೇವಸ್ಥಾನ ಆಡಳಿತ ಮಂಡಳಿ, ವ್ಯವಸ್ಥಾಪನ ಸಮಿತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಒಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ.

ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ವತಿಯಿಂದ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿದೆ
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ
ಮುನಿರಾಬಾದ್ ಸಮೀಪ ಹುಲಿಗಿಯ ಹುಲಿಗೆಮ್ಮ ದೇವಿ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ

‘ಭಕ್ತರ ಸ್ನಾನಕ್ಕೆ ವ್ಯವಸ್ಥೆ’

‘ತುಂಗಭದ್ರಾ ನದಿಗೆ ನೀರು ಬಿಡುವಂತೆ ನೀರಾವರಿ ನಿಗಮ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ. ನೀರು ಬರುವ ಭರವಸೆ ಇದೆ ಎಂದು ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಈ.ವೀರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೊಳವೆಬಾವಿ ಸಂಪರ್ಕ ಪಡೆದು ನದಿ ದಡದಲ್ಲಿ 10-15 ಜನ ಏಕಕಾಲಕ್ಕೆ ಸ್ನಾನ ಮಾಡುವ ಷೋವರ್ ವ್ಯವಸ್ಥೆ ಮಾಡಿದ್ದೇವೆ. ಭಕ್ತರಿಗಾಗಿ ಸುಮಾರು 10 ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ. ಭಕ್ತರು ವಸತಿ ಗೃಹದಲ್ಲಿ ತಂಗುವ ಮತ್ತು ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆಯ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.