ADVERTISEMENT

ಕೊಪ್ಪಳ | ವಿಭಿನ್ನ ಮಾದರಿ ಲಿಂಬೆ ಕೃಷಿ ಮಾಡಿದ ರೈತ

ಎರಡು ಎಕರೆ ಪ್ರದೇಶದಲ್ಲಿ ಸಮೃದ್ಧ ಫಸಲು ಪಡೆದಿರುವ ಯುವಕ ವೀರಭದ್ರಪ್ಪ

ಪ್ರಮೋದ
Published 10 ಜುಲೈ 2024, 6:30 IST
Last Updated 10 ಜುಲೈ 2024, 6:30 IST
ಕೊಪ್ಪಳ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ವೀರಭದ್ರಪ್ಪ ಘಂಟಿ ಬೆಳೆದ ಲಿಂಬೆಹಣ್ಣು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ವೀರಭದ್ರಪ್ಪ ಘಂಟಿ ಬೆಳೆದ ಲಿಂಬೆಹಣ್ಣು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ   

ಕೊಪ್ಪಳ: ಪುಟ್ಟ ಕಾಡಿನಂತೆ ಕಂಗೊಳಿಸುವ ಹಸಿರಿನ ಈ ತೋಟ ಇರುವುದು ಕೊಪ್ಪಳ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ. ಕಣ್ಣು ಹಾಯಿಸಿದಷ್ಟೂ ದೂರ ತರಹೇವಾರಿ ತೋಟಗಾರಿಕಾ ಬೆಳೆಗಳು ಕಾಣಿಸುತ್ತವೆ.

ಕೊಪ್ಪಳ ಜಿಲ್ಲೆ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿ. ಅದರಲ್ಲಿಯೂ ಕಡಿಮೆ ಸಮಯದಲ್ಲಿ ಫಸಲು ಬರುವ ಮತ್ತು ಹೆಚ್ಚು ಲಾಭ ತಂದುಕೊಡುವ ಲಿಂಬೆಹಣ್ಣಿನ ಕೃಷಿ ರೈತರನ್ನು ಉದ್ಯಮಿಗಳನ್ನಾಗಿ ಮಾಡುತ್ತಿವೆ.

ಇದೇ ಕೃಷಿಯಲ್ಲಿ ಕಲಕೇರಿ ಗ್ರಾಮದ ಯುವಕ ವೀರಭದ್ರಪ್ಪ ಘಂಟಿ ತಮ್ಮ ಎರಡು ಎಕರೆ ಭೂಮಿಯಲ್ಲಿ ಲಿಂಬೆ ಬೆಳೆದಿದ್ದಾರೆ. ತಮ್ಮ ಹೊಲದಲ್ಲಿ ಕಸ ತೆಗೆಯುವುದು, ಲಿಂಬೆ ಬೆಳೆಸುವುದು, ಕಾಯಿಗಳನ್ನು ಕೀಳುವುದು ಹೀಗೆ ಎಲ್ಲ ಕೆಲಸದಲ್ಲಿ ವೀರಭದ್ರಪ್ಪ ಅವರದ್ದೇ ಶ್ರಮ. ಒಮ್ಮೆ ನಾಟಿ ಮಾಡಿದ ಗಿಡದ ಫಸಲು ಕನಿಷ್ಠ 20ರಿಂದ 25 ವರ್ಷದ ತನಕ ಸವಿಯುವ ರೀತಿಯಲ್ಲಿ ಸ್ವಯಂ ಕೃಷಿ ಪದ್ಧತಿ ರೂಢಿಸಿಕೊಂಡಿದ್ದಾರೆ. ಒಂದು ಎಕರೆಗೆ ವಾರ್ಷಿಕ ಕನಿಷ್ಠ ಎರಡು ಲಕ್ಷ ಲಾಭ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

ಲಿಂಬೆ ಬೆಳೆಯುವ ರೈತರು ಸಾಮಾನ್ಯವಾಗಿ ಈ ಬೆಳೆಗೆ ಹೆಸರಾದ ವಿಜಯಪುರ ಅಥವಾ ಬೇರೆ ಜಿಲ್ಲೆಗಳಿಂದ ಸಸಿ ತಂದು ತಮ್ಮ ತೋಟದಲ್ಲಿ ನೆಟ್ಟು ಪಾಲನೆ ಪೋಷಣೆ ಮಾಡುತ್ತಾರೆ. ಆದರೆ ವೀರಭದ್ರಪ್ಪ ಇನ್ನೊಬ್ಬರ ಮೇಲೆ ಅವಲಂಬನೆ ಯಾಕೆ ಎಂದುಕೊಂಡು ಕೊಳೆತ ಲಿಂಬೆಹಣ್ಣುಗಳನ್ನು ಒಂದೆಡೆ ಕೂಡಿಟ್ಟು ಅವುಗಳ ಬೀಜಗಳನ್ನು ಒಣಗಿಸಿ ತಾವೇ ಸಸಿ ತಯಾರು ಮಾಡಿದ್ದಾರೆ. ಅವುಗಳನ್ನೇ ತಮ್ಮ ಹೊಲದಲ್ಲಿ ನೆಟ್ಟು ಎತ್ತರದ ಗಿಡಗಳನ್ನು ಬೆಳೆಸಿ ಮೋಸಂಬಿ ಹಣ್ಣಿನ ಅಳತೆಯಷ್ಟು ದೊಡ್ಡದಾದ ಲಿಂಬೆಹಣ್ಣುಗಳನ್ನು ಬೆಳೆದಿದ್ದಾರೆ. ಈಗ ಬೇರೆಯವರಿಗೇ ಸಸಿಗಳನ್ನು ಕೊಡುವಷ್ಟು ಸದೃಢರಾಗಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಲಿಂಬೆಹಣ್ಣು ಮಾರುತ್ತಿದ್ದು, ಇವರ ಈ ಕೃಷಿ ಪದ್ಧತಿ ಅನುಕರಣೀಯವಾಗಿದೆ.

ತಮ್ಮ ಹೊಲದ ಮತ್ತಷ್ಟು ಜಾಗದಲ್ಲಿ ಮಿಶ್ರಕೃಷಿ ಮಾಡುತ್ತಿರುವ ವೀರಭದ್ರಪ್ಪ ಮುಳ್ಳು ಸವತೆಕಾಯಿ, ಬಟನ್ ರೋಸ್‌, ಸಜ್ಜೆ ಬೆಳೆಯುತ್ತಿದ್ದಾರೆ. ಮೂಲತಃ ಸಿದ್ಧಿ ಜನಾಂಗದ ಯುವಕನ ಕುಟುಂಬದವರು ಊರೂರು ಅಲೆದಾಡುವುದು ವೃತ್ತಿಯಾಗಿದೆ. ಈ ಯುವಕ ಕುಟುಂಬದ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿ ಕೃಷಿ ಕಾಯಕದಲ್ಲಿ ತೊಡಗಿದ್ದಾನೆ.

‘ಕೃಷಿಯನ್ನೇ ನೆಚ್ಚಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಆದರೆ ಕಾರ್ಮಿಕರ ಕೊರತೆ ವಿಪರೀತವಾಗಿದೆ. ಅವರ ಮೇಲೆ ಸಂಪೂರ್ಣವಾಗಿ ಅವಲಂಬನೆಯಾಗದೆ ಹೆಚ್ಚು ಶ್ರಮ ಪಟ್ಟರೆ ಉತ್ತಮ ಆದಾಯ ಗಳಿಸಬಹುದು. ಈಗ ನಮ್ಮ ತೋಟದಲ್ಲಿನ ಲಿಂಬೆ ಬೀಜಗಳನ್ನು ಬಳಸಿಕೊಂಡೇ ಸಸಿಗಳನ್ನು ತಯಾರಿಸುತ್ತಿದ್ದೇನೆ. ಇದೇ ಮಾದರಿ ಎಲ್ಲರೂ ಅನುಸರಿಸಬಹುದು’ ಎಂದು ವೀರಭದ್ರಪ್ಪ ಹೇಳುತ್ತಾರೆ. 

ವೀರಭದ್ರಪ್ಪ ಬೆಳೆದ ಲಿಂಬೆಹಣ್ಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.