ಯಲಬುರ್ಗಾ: ತಾಲ್ಲೂಕಿನ ಗೆದಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಪರ್ಶ ಕುಷ್ಠರೋಗ ಕುರಿತ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ವಿದ್ಯಾಶ್ರೀ ಕುಡಗುಂಟಿ ಮಾತನಾಡಿ,‘ಸೂಕ್ತ ಚಿಕಿತ್ಸೆ ಪಡೆದರೆ ಕುಷ್ಠರೋಗದಿಂದ ಗುಣಮುಖರಾಗಬಹುದು. ಇದರ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಕರ್ನಾಟಕವನ್ನು ಕುಷ್ಠರೋಗ ಮುಕ್ತ ರಾಜ್ಯವನ್ನಾಗಿ ಮಾಡುವ ಸರ್ಕಾರದ ಸಂಕಲ್ಪಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ಶ್ರೀದೇವಿ ತೋಟದ ಮಾತನಾಡಿ,‘ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ಪ್ರಯುಕ್ತ ರಾಷ್ಟ್ರೀಯ ಕುಷ್ಠರೋಗ ದಿನಾಚರಣೆ ಆಚರಿಸುತ್ತಿರುವ ಕಾರಣ ಫೆ.13ರವರೆಗೆ ಜಾಗೃತಿ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದರು. ವ್ಯಕ್ತಿಯ ದೇಹದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರದ ಸಹಾಯಕ, ಸಹಾಯಕಿಯರ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು ಹಾಗೂ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತಿಜ್ಞಾವಿಧಿ ಬೊಧಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಯ ನಾಗಭೂಷಣ ಚಿನಿವಾಲರ, ದೇವಪ್ಪ ಮುಗಳಿ, ಗಣೇಶ ರಾಠೋಡ, ಸಂಗಮೇಶ, ಮಲ್ಲನಗೌಡ, ಮಲ್ಲಿಕಾರ್ಜುನ ಚಿಕ್ಕೊಡಿ, ಹನಮೇಶ ಹರಿಜನ, ಆಶಾ ಕಾರ್ಯಕರ್ತೆ ಭಾಗ್ಯಶ್ರೀ ಗೊಲ್ಲರ ಹಾಗೂ ಜಯಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.