ಕುಷ್ಟಗಿ: ಚಿತ್ರನಟ ಯಶ್ ಅವರ ಯಶೋಮಾರ್ಗ ಫೌಂಡೇಷನ್ ಮೂಲಕ ಅಭಿವೃದ್ಧಿಗೊಂಡು ರಾಜ್ಯದ ಗಮನ ಸೆಳೆದಿದ್ದ ತಲ್ಲೂರು (ಯಲಬುರ್ಗಾ ತಾಲ್ಲೂಕು) ಕೆರೆ ಬಹಳಷ್ಟು ವರ್ಷಗಳ ನಂತರ ಭರ್ತಿಯಾಗಿ, ಕೋಡಿ ಮೂಲಕ ನೀರು ಹರಿದಿದೆ.
ಕಳೆದ ಎರಡು ದಿನಗಳ ಅವಧಿಯಲ್ಲಿ ಅತ್ಯಧಿಕ ಮಳೆ ಸುರಿದಿದ್ದು, ಕೆರೆಗೆ ಅಪಾರ ಪ್ರಮಾಣದ ನೀರು ಬಂದಿದೆ. ಶುಕ್ರವಾರ ಕೋಡಿ ಮೂಲಕ ನೀರು ಹರಿಯುತ್ತಿದ್ದ ಜೀವಕಳೆಯ ದೃಶ್ಯವನ್ನು ಜನರು ಕಣ್ತುಂಬಿಕೊಂಡರು. ಕೆಲವು ಬಾರಿ ಕೆರೆಗೆ ಸಾಕಷ್ಟು ನೀರು ಬಂದರೂ ಕೋಡಿ ಬಿದ್ದಿರಲಿಲ್ಲ. ದಶಕದ ಹಿಂದೆ ಒಂದು ಬಾರಿ ಕೆರೆ ಕೋಡಿ ಮೂಲಕ ನೀರು ಹೋಗಿತ್ತು. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.
2017ರ ಅವಧಿಯಲ್ಲಿ ಅನಾವೃಷ್ಟಿ, ಅಂತರ್ಜಲ ಕೊರತೆಯಿಂದ ಜಿಲ್ಲೆಯ ಜನ ಜಾನುವಾರುಗಳು ಕಂಗೆಟ್ಟಿದ್ದು, ಇತರೆ ಕೆರೆಗಳಂತೆ ತಲ್ಲೂರು ಕೆರೆಯೂ ಬತ್ತಿಹೋಗಿದ್ದು ಜಲ ಸಂರಕ್ಷಣೆ ಕಾರ್ಯಕರ್ತರ ಮೂಲಕ ಯಶೋಮಾರ್ಗ ಫೌಂಡೇಷನ್ ಗಮನಕ್ಕೆ ಬಂದಿತ್ತು. ನಂತರ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸಲು ಫೌಂಡೇಷನ್ ಯೋಜನೆ ರೂಪಿಸಿತ್ತು.
ಸ್ವತಃ ಕೆರೆ ಅಭಿವೃದ್ಧಿಗೆ ಆಸಕ್ತಿ ವಹಿಸಿದ್ದ ನಟ ಯಶ್ ದಂಪತಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿ ಅಂದಾಜು ₹4 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದರು. ಪೂರ್ಣ ಪ್ರಮಾಣದ ಹಣ ಖರ್ಚಾಗದಿದ್ದರೂ, ಸುಮಾರು 94 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಆಳದವರೆಗಿನ ಹೂಳನ್ನು ತೆಗೆಸಲಾಗಿತ್ತು.
ಕೆರೆ ಅಭಿವೃದ್ಧಿಗೊಂಡ ನಂತರ ಮೊದಲ ಬಾರಿಗೆ ಕೆರೆ ಕೋಡಿ ಹರಿದಿದ್ದು ಸುತ್ತಲಿನ ಹತ್ತಾರು ಹಳ್ಳಿಗಳ ಜನರ ಸಂತಸ ಇಮ್ಮಡಿಸಿದೆ ಎಂದು ತಲ್ಲೂರು ಗ್ರಾಮದ ರೈತ ಕಳಕಯ್ಯ, ಹನುಮಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.