ಗಂಗಾವತಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1408 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.
ಅದಾಲತ್‌ನಲ್ಲಿ ರಸ್ತೆ ಅಪಘಾತ, ಚಕ್ ಬೌನ್ಸ್, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ ತಾಲ್ಲೂಕು ನ್ಯಾಯಾಲಯದಲ್ಲಿ ಒಟ್ಟು 9,332 ಪ್ರಕರಣಗಳು ಬಾಕಿಯಿದ್ದು, ಅದರಲ್ಲಿ 2081 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.
ತಾಲ್ಲೂಕು ನ್ಯಾಯಾಲಯದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಿರಿಯ ಸಿವಿಲ್ ಜಡ್ಜ್ ಮತ್ತು ಪ್ರಧಾನ ದ.ನ್ಯಾ.ದಂಗಳ ನ್ಯಾಯಾಲಯ, ಪ್ರಧಾನ ಸಿವಿಲ್ ಜಡ್ಜ್ ಮತ್ತು ಪ್ರ.ದ.ನ್ಯಾ.ದಂಗಳ ನ್ಯಾಯಾಲಯ ಹಾಗೂ ಹೆಚ್ಚುವರಿ ಸಿವಿಲ್ ಜಡ್ಜ್ ಪ್ರ.ದ.ನ್ಯಾ.ದಂಗಳ ನ್ಯಾಯಾಲಯದಲ್ಲಿ ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಅದಾಲತ್ ನಡೆಯಿತು.
04 ನ್ಯಾಯಾಧೀಶರು ಹಾಗೂ 370 ಸಮಾಲೋಚನಾ ವಕೀಲರು ಅದಾಲತ್ ನಡೆಸಿಕೊಟ್ಟರು. ಕೆಲ ಅರ್ಜಿದಾರರು ವಕೀಲರೊಂದಿಗೆ ಅದಾಲತ್‌ನಲ್ಲಿ ಭಾಗವಹಿಸಿದ್ದರು. ನಗರದ ತಾಲ್ಲೂಕು ನ್ಯಾಯಾಲಯದಲ್ಲಿ ಅರ್ಜಿದಾರರ ಜಂಗುಳಿ ಇತ್ತು. ಸರದಿಯಲ್ಲಿ ಪ್ರಕರಣಗಳ ಇತ್ಯರ್ಥ ನಡೆಯಿತು.
24 ಚಕ್ ಬೌನ್ಸ್ ಪ್ರಕರಣ, 67 ರಸ್ತೆ ಅಪಘಾತ ಪ್ರಕರಣ, 02 ಕೌಟುಂಬಿಕ ವ್ಯಾಜ್ಯ, 1047 ಕ್ರಿಮಿನಲ್, 210 ಜನನ ಮತ್ತು ಮರಣ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಇವುಗಳಿಂದ ಸರ್ಕಾರಕ್ಕೆ ₹7,36,02 877 ಮೊತ್ತ ಜಮೆ ಮಾಡಲಾಗಿದೆ.
1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ರಮೇಶ ಎಸ್. ಗಾಣಿಗೇರಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೇ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಾಗೇಶ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಸೇರಿದಂತೆ ವಕೀಲರು, ಅರ್ಜಿದಾರರು, ಎಸ್‌ಬಿಐ ಬ್ಯಾಂಕ್, ಬಿಎಸ್‌ಎನ್‌ಎಲ್ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.