ADVERTISEMENT

ಕೊಪ್ಪಳ: ಚುನಾವಣಾ ಕಾವು ಮೀರಿಸುತ್ತಿದೆ ಬಿಸಿಲು

ಪ್ರಮೋದ
Published 2 ಮೇ 2024, 4:35 IST
Last Updated 2 ಮೇ 2024, 4:35 IST
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಯುವಕರು
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಯುವಕರು   

ಕೊಪ್ಪಳ: ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದ್ದು ದಿನದಿಂದ ದಿನಕ್ಕೆ ಕಾವು ರಂಗೇರುತ್ತಲೇ ಇದ್ದರೆ, ಇನ್ನೊಂದಡೆ ಬಿಸಿಲಿನ ತಾಪ ಕೂಡ ಚುನಾವಣೆಯನ್ನು ಮೀರಿಸುವಂತೆ ಹೆಚ್ಚಾಗುತ್ತಲೇ ಇದೆ.

ಕೆಂಡದಂಥ ಬಿಸಿಲು, ಅರೆ ಝಳ, ತಾಪ, ಬೆವರಿನ ಪ್ರತಾಪ ಹಾಗೂ ಬಿಸಿಗಾಳಿ ಹೀಗೆ ಅನೇಕ ಕಾರಣಗಳಿಂದಾಗಿ ನಿತ್ಯ ಜನ ಹೈರಾಣಾಗುತ್ತಿದ್ದಾರೆ. ಹೊರಗಡೆ ಕಾಲಿಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಜನರ ದೈನಂದಿನ ಬದುಕಿನ ಮೇಲಷ್ಟೇ ಅಲ್ಲ, ಲೋಕಸಭಾ ಚುನಾವಣೆಯ ಸವಾಲು ಎದುರಿಸುತ್ತಿರುವ ರಾಜಕೀಯ ಪಕ್ಷಗಳ ನಾಯಕರಿಗೂ ಅಗ್ನಿಪರೀಕ್ಷೆಯ ಸಮಯವಾಗಿದೆ.

ಮತದಾನ ದಿನಾಂಕ (ಮೇ 7) ಸಮೀಪಿಸುತ್ತಿರುವ ಕಾರಣ ರಾಜಕೀಯ ಪಕ್ಷಗಳು ಕ್ಷೇತ್ರದಾದ್ಯಂತ ಮೇಲಿಂದ ಮೇಲೆ ಸಭೆ, ಸಮಾರಂಭ ಹಾಗೂ ಸಮಾವೇಶಗಳನ್ನು ಆಯೋಜಿಸುತ್ತಿವೆ. ಇವುಗಳಿಗೆ ಕಾರ್ಯಕರ್ತರನ್ನು ಮತ್ತು ಜನರನ್ನು ಕರೆ ತರುವುದೇ ದೊಡ್ಡ ಸವಾಲಿನ ಕೆಲಸವಾಗುತ್ತಿದೆ. ರಾಜಕೀಯ ಕಾರ್ಯಕ್ರಮಗಳಲ್ಲಿಯೂ ಜನ ಹೆಚ್ಚು ಹೊತ್ತು ಕೂಡುತ್ತಿಲ್ಲ.

ADVERTISEMENT

ದಾಖಲೆಯ ಬಿಸಿಲು: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಏ. 18ರಿಂದ ಬೆಳಿಗ್ಗೆ 8.30ರಿಂದ 19ರ ತನಕದ ಅವಧಿಯಲ್ಲಿ 43.1 ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಇಷ್ಟು ದಿನಗಳ ತನಕ ಅವಧಿಯಲ್ಲಿ ಈ ವರ್ಷದಲ್ಲಿ ದಾಖಲಾದ ಗರಿಷ್ಠ ತಾಪಮಾನ ಇದಾಗಿತ್ತು. ಈ ದಾಖಲೆಯೂ ಈಗ ಮುರಿದು ಹೋಗಿದ್ದು ಏ.29ರಿಂದ 30ರ ಅವಧಿಯಲ್ಲಿ ಜಿಲ್ಲೆ ವ್ಯಾಪ್ತಿಯಲ್ಲಿ 44.2ರಷ್ಟು ಬಿಸಿಲಿನ ತಾಪಮಾನ ದಾಖಲೆಯಾಗಿದೆ.

ಇದರಿಂದ ಬೇಸತ್ತು ಹೋಗಿರುವ ಜನ ಮಳೆಗಾಗಿ ಹಂಬಲಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೆಲ ಹೊತ್ತು ಸುರಿದಿದ್ದ ಮಳೆ ಮಾಯವಾಗಿದೆ. ತಾಪದಿಂದ ಪಾರಾಗಲು ತಂಪು ಪಾನೀಯ, ಕಲ್ಲಂಗಡಿ, ಎಳೆನೀರು, ಕೆಂಪು ಕಲ್ಲುಸಕ್ಕರೆ ಮೊರೆ ಹೋಗಿದ್ದರೆ, ಬೀದಿಬದಿಯ ವ್ಯಾಪಾರಿಗಳು ಅತ್ಯಂತ ತ್ರಾಸದಾಯಕ ವಾತಾವರಣದಲ್ಲಿಯೂ ಹೊಟ್ಟೆ ಹೊರೆಯುಲು ಹಣ್ಣು, ಹೂವು, ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ.

ರಾತ್ರಿಯೂ ಸೆಕೆ: ದಿನಪೂರ್ತಿ ಸೂರ್ಯನ ಪ್ರತಾಪಕ್ಕೆ ನಲುಗಿ ಹೋಗಿರುವ ಜನ ರಾತ್ರಿ ವೇಳೆಯಲ್ಲಿಯೂ ಸೆಕೆಯಿಂದಾಗಿ ಬಳಲುತ್ತಿದ್ದಾರೆ. ಸರಿಯಾಗಿ ನಿದ್ದೆಯನ್ನೂ ಮಾಡಲಾಗದೆ ಮಧ್ಯರಾತ್ರಿ, ಬೆಳಗಿನ ಜಾವದಲ್ಲಿ ಎದ್ದು ಕೂಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನ ಕೂಲರ್‌ಗಳ ಖರೀದಿಗೆ ಮುಂದಾಗಿದ್ದಾರೆ. ದಿನಪೂರ್ತಿ ಬಳಸುತ್ತಿರುವ ಫ್ಯಾನ್‌ ಗಾಳಿ ಕೂಡ ಕೆಲ ಹೊತ್ತಿನಲ್ಲಿಯೇ ಬಿಸಿಯಾಗುತ್ತಿದೆ. ನೆಲವೂ ಬಿಸಿಬಿಸಿ. ಹೀಗಾಗಿ ಬಿಸಿಲು ಬದುಕು ಬೆಂಡಾಗುವಂತೆ ಮಾಡಿದೆ.

‘ಬಿಸಿಲು, ಮಳೆ ಹಾಗೂ ಬಿರುಗಾಳಿ ಏನೇ ಬರಲಿ ನಮ್ಮ ಬದುಕು ಸಾಗಲು ಎಂಥದ್ದೇ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಇಷ್ಟೊಂದು ಬಿಸಿಲಿದ್ದರೂ ಬಯಲಿನಲ್ಲಿಯೇ ದುಡಿಯಬೇಕು. ಇಲ್ಲವಾದರೆ ಅಂದಿನ ಅನ್ನ ಸಿಗುವುದಿಲ್ಲ. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿದು, ಸಣ್ಣದೊಂದು ಛತ್ರಿ ಹಿಡಿದು ವ್ಯಾಪಾರ ಮಾಡುತ್ತೇನೆ’ ಎಂದು ಹಣ್ಣುಗಳ ವ್ಯಾಪಾರಿ ಅನ್ನಪೂರ್ಣಮ್ಮ ಹೇಳುತ್ತಾರೆ.

ಈಜುಕೊಳಕ್ಕೆ ಲಗ್ಗೆ

ಬಿಸಿಲಿನ ತಾಪದಿಂದ ಪಾರಾಗಲು ಅನೇಕ ಯುವಕರು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಈಜುಕೊಳಕ್ಕೆ ಮೊರೆ ಹೋಗಿದ್ದಾರೆ.

ಬೆಳಿಗ್ಗೆನಿಂದ ಸಂಜೆ ತನಕ ಕೊಳದಲ್ಲಿ ಮಿಂದೆದ್ದು ಬಿಸಿಲಿನಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ. ಖುದ್ದು ಕ್ರೀಡಾ ಇಲಾಖೆಯೇ ಬೇಸಿಗೆ ಶಿಬಿರದ ಭಾಗವಾಗಿ ಈಜು ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳ ಶಾಲಾ ರಜೆ ಅವಧಿ ಸದ್ಬಳಕೆಯಾಗಲಿ ಎಂದು ತರಬೇತಿ ನೀಡಲಾಗುತ್ತಿದೆ ಎಂದು ಹೇಳುತ್ತಾರೆ ಕ್ರೀಡಾ ಇಲಾಖೆಯ ಅಧಿಕಾರಿಗಳು.

ಬೆಳಿಗ್ಗೆ 6.30ರಿಂದ ಸಂಜೆ 6 ಗಂಟೆ ತನಕ ಕೊಳ ತೆರೆದಿರುತ್ತದೆ. ‘ಕ್ರೀಡಾ ಇಲಾಖೆ ವತಿಯಿಂದ ಸ್ಕೇಟಿಂಗ್‌ ಬ್ಯಾಡ್ಮಿಂಟನ್‌ ವಾಲಿಬಾಲ್‌ ಕ್ರಿಕೆಟ್‌ ಈಜು ತರಬೇತಿ ನೀಡಲಾಗುತ್ತಿದೆ. ಆಸಕ್ತರು 8310802801 (ವಿಶಾಲ್‌) ಅಥವಾ 9535559769 (ಯಲ್ಲಪ್ಪ) ಅವರನ್ನು ಸಂಪರ್ಕಿಸಬಹುದು’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.