ಗಂಗಾವತಿ (ಕೊಪ್ಪಳ ಜಿಲ್ಲೆ): ಉತ್ತರಾದಿ ಮಠದ ಪರಂಪರೆಯ ಪೂರ್ವ ಯತಿಗಳಾದ ರಘುವರ್ಯ ತೀರ್ಥರ ಮಧ್ಯಾರಾಧನೆ ಅಂಗವಾಗಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ನೆರವೇರಿಸಿದರು.
ಸತ್ಯಾತ್ಮತೀರ್ಥರು ರಘುವರ್ಯರ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪೂಜೆ ಮಂಗಳರಾತಿ ನೆರವೇರಿಸಿದರು. ಭಕ್ತರಿಗೆ ತಪ್ತ ಮುದ್ರಧಾರಣೆ ನೀಡಿದರು. ಮೂಲ ರಾಮದೇವರಿಗೆ ಪೂಜೆ ನೆರವೇರಿಸಿದರು.
ಉತ್ತರಾದಿಮಠಕ್ಕೆ ಅವಕಾಶ: ಆರಾಧನೆ ನಡೆಸಲು ಉತ್ತರಾದಿಮಠದವರು, ಸುಧಾಸಮರ್ಪಣ ಸಂಸ್ಮರಣೋತ್ಸವ ನಡೆಸಲು ರಾಯರ ಮಠದವರು ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯೇ ಅನುಮತಿ ಪಡೆಯಬೇಕು ಎಂದು ಜಿಲ್ಲಾಡಳಿತ ಹೇಳಿದ್ದರಿಂದ ಉತ್ತರಾದಿಮಠವು ಧಾರವಾಡದ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್, ಆರಾಧನೆ ನಡೆಸಲು ಸೋಮವಾರ ಉತ್ತರಾದಿಮಠಕ್ಕೆ ಅವಕಾಶ ಕೊಟ್ಟಿತ್ತು.
ಈ ವಿಷಯ ಗೊತ್ತಾಗುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮಧ್ಯಾರಾಧನೆಗೆ ನವವೃಂದಾವನ ಗಡ್ಡೆಗೆ ಬಂದು ದರ್ಶನ ಪಡೆದರು. ಬುಧವಾರ ಉತ್ತರಾರಾಧನೆ ನಡೆಯಲಿದ್ದು, ಸತ್ಯಾತ್ಮತೀರ್ಥರೇ ಪೂಜೆ ನೆರವೇರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.