ADVERTISEMENT

ವಚನ ಸಾಹಿತ್ಯ ಸಂರಕ್ಷಕ ಮಡಿವಾಳ ಮಾಚಿದೇವ: ವಿರೇಶ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 3:15 IST
Last Updated 2 ಫೆಬ್ರುವರಿ 2022, 3:15 IST
ಗಂಗಾವತಿ ನಗರದ ಲಲೀತ್ ಮಹಲ್ ಸಮೀಪದ ಮಡಿವಾಳ ಮಾಚಿದೇವರ ನಾಮಫಲಕಕ್ಕೆ ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಮಾಚಿದೇವರ ಜಯಂತಿ ಆಚರಿಸಿದರು. ಸಮಾಜದ ಮುಖಂಡರು ಇದ್ದರು.
ಗಂಗಾವತಿ ನಗರದ ಲಲೀತ್ ಮಹಲ್ ಸಮೀಪದ ಮಡಿವಾಳ ಮಾಚಿದೇವರ ನಾಮಫಲಕಕ್ಕೆ ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಮಾಚಿದೇವರ ಜಯಂತಿ ಆಚರಿಸಿದರು. ಸಮಾಜದ ಮುಖಂಡರು ಇದ್ದರು.   

ಗಂಗಾವತಿ: ವಿಶ್ವದಲ್ಲಿ ವಚನ ಸಾಹಿತ್ಯ ಬೆಳಕಿಗೆ ತಂದಿರುವ ವ್ಯಕ್ತಿಗಳಲ್ಲಿ ಮಡಿವಾಳ ಮಾಚಿದೇವರು ಸಹ ಪ್ರಮುಖರಾಗಿರುತ್ತಾರೆ ಎಂದು ರಾಷ್ಟ್ರೀಯ ಬಸವದಳ ತಾಲ್ಲೂಕು ಕಾರ್ಯದರ್ಶಿ ವಿರೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಲಲೀತ್ ಮಹಲ್ ಸಮೀಪದ ಮಡಿವಾಳ ಮಾಚಿದೇವರ ವೃತ್ತಕ್ಕೆ ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಮಾಚಿದೇವರ ಜಯಂತಿ ಆಚರಿಸಿ ಮಾತನಾಡಿದರು. ಕೇವಲ ಲಿಂಗ ಹಿಡಿದು ಧ್ಯಾನ ಮಾಡಿದರೆ ಮಾತ್ರ ದೇವರ ಕಾಣಲು ಸಾಧ್ಯವಾಗುತ್ತದೆ ಎನ್ನುವುದು ಬಿಟ್ಟು, ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು.

ಜೊತೆಗೆ ಮಹಾತ್ಮರ ಕಾಯಕ ಮತ್ತು ಜೀವನ ಸಂದೇಶಗಳನ್ನು ಅಳವಡಿಸಿ ಕೊಂಡು ನಡೆದಾಗ ಮಾತ್ರ ಜಯಂತಿಗಳು ಅರ್ಥಪೂರ್ಣವಾಗುತ್ತವೆ ಎಂದರು.

ADVERTISEMENT

ಈ ವೇಳೆಯಲ್ಲಿ ಶೇಖರ್ ಸ್ವಾಮಿ, ರಮೇಶ ಬಸಾಪಟ್ಟಣ, ಮಿಂಚುಬಂಡಿ ಯಮನಪ್ಪ, ಈರಣ್ಣ, ವಿರೇಶ ಗೋರಬಾಳ, ಮಂಜುನಾಥ, ಜಬ್ಬಲಗುಡ್ಡ, ರಾಘವೇಂದ್ರ ಇದ್ದರು.

ಮರಕುಂಬಿ (ಗಂಗಾವತಿ): ಮಡಿವಾಳ ಮಾಚಿದೇವರು ಕೇವಲ ಒಂದೇ ಜಾತಿಗೆ ಸೀಮಿತವಾಗಿರದೇ, ಎಲ್ಲ ಸಮುದಾಯಗಳ ಅಭಿವೃದ್ದಿ ಬಯಸಿ, ಸರ್ವ ಜನಾಂಗಕ್ಕೆ ಪ್ರೀತಿ ಪಾತ್ರರಾಗಿದ್ದಾರೆ ಎಂದು ಕೇಸರಹಟ್ಟಿ ಗ್ರಾ.ಪಂ ಅಧ್ಯಕ್ಷ ಎಚ್. ಬಸವರಾಜ ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ಮರಕುಂಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಶೋಷಣೆ, ತಾರತಮ್ಯ ನೀತಿ, ಅಸ್ಪೃಶ್ಯತೆ, ಮೂಢನಂಬಿಕೆ ಗಳಿಂದ ಜನರು ಸಾಮಾಜಿಕ ವಾಗಿ ತುಂಬಾ ಹಿಂದುಳಿದಿದ್ದರು. ಜನರನ್ನು ಇವುಗಳಿಂದ ಮುಕ್ತಿ ಪಡಿಸಲೆಂದೇ ಮಡಿವಳಾ ಮಾಚಿದೇವರು ಸಾಮಾಜಿಕ ಕ್ರಾಂತಿ ಕೈಗೊಂಡರು ಎಂದರು.

ವಿಶ್ವಕರ್ಮ ಸಮಾಜದ ಮುಖಂಡ ದೇವಪ್ಪ ಬಡಿಗೇರ ಮಾತನಾಡಿ, ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ತುಂಬಾ ಮಹತ್ವದ್ದಾಗಿದೆ. ದೇಶದ ವಿವಿಧ ಭಾಗಗಳಿಂದ ಕಲ್ಯಾಣಕ್ಕಾಗಿ ಬರುವವರನ್ನು ಪರೀಕ್ಷಿಸಿ 'ಮಡಿ' ಹಾಸಿ ಸ್ವಾಗತಿಸುವ ಕೆಲಸ ಮಾಡುತ್ತಿದ್ದರು. ಈ ಕಾರ್ಯ ದಿಂದಲೇ ಮಡಿವಾಳ ಮಾಚಿದೇವರು ಮಹಾ ಘನತೆಗೆ ಸಾಕ್ಷಿಯಾಗಿದ್ದಾರೆ ಎಂದರು.

ಈ ವೇಳೆಯಲ್ಲಿ ಶಾಲೆಯ ದೈಹಿಕ ಶಿಕ್ಷಕ ಹುಸೇನಸಾಬ ಮಕಾಂದಾರ ಮಾತನಾಡಿದರು. ಮಡಿವಾಳ ಮಾಚಿದೇವ ಟ್ರಸ್ಟ್ ಗ್ರಾಮ ಘಟಕ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಕೇಸರಹಟ್ಟಿ ಗ್ರಾ.ಪಂ ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಗ್ರಾಮಸ್ಥರು, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.