ಕನಕಗಿರಿ: 40 ವರ್ಷಗಳ ಬಳಿಕ ಮನೆಗೆ ವಾಪಸ್ ಆಗಿದ್ದ ತಾಲ್ಲೂಕಿನ ಆದಾಪುರ ಗ್ರಾಮದ ವಿಶ್ವನಾಥಗೌಡ ಪಾಟೀಲ ಬುಧವಾರ ನಿಧನರಾಗಿದ್ದಾರೆ.
ಆರ್‌ಡಿಸಿಸಿ ಬ್ಯಾಕ್‌ನ ಸಿಂಧನೂರು ಶಾಖೆಯ ವ್ಯವಸ್ಥಾಪಕರಾಗಿದ್ದ ಆದಾಪುರದ ವಿಶ್ವನಾಥಗೌಡ ಪಾಟೀಲ ಅವರು 40 ವರ್ಷಗಳ ಹಿಂದೆ ಚೆಕ್ ಬೌನ್ಸ್ ಪ್ರಕರಣದಿಂದ ಮನನೊಂದು ಊರು ತೊರೆದಿದ್ದರು. ಇತ್ತ ಕುಟುಂಬ ವರ್ಗದವರು ಅವರನ್ನು ಹುಡುಕಿ ನಿರಾಶೆಗೊಂಡು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ನೆರೆಯ ಮಹಾರಾಷ್ಟ್ರ ಸತಾರ್ ಜಿಲ್ಲೆಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ವಿಶ್ವನಾಥಗೌಡರು ಮತ್ತೊಂದು ಮದುವೆಯಾಗಿದ್ದರು. ಈಚೆಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಗೌಡರು ಊರು ನೆನಪು ಮಾಡಿಕೊಂಡು ನ.15ರಂದು ಊರಿಗೆ ಬಂದಾಗ ಇಡೀ ಕುಟುಂಬ ಸಂಭ್ರಮಿಸಿತ್ತು. ಆದರೆ ಕುಟುಂಬದ ಸಂತೋಷ ಬಹಳ ದಿನ ಇರಲಿಲ್ಲ, ಕ್ಯಾನ್ಸರ್ ಚಿಕಿತ್ಸೆಗೆ ಮಹಾರಾಷ್ಟ್ರದ ಕಡೆಗೆ ಪಯಣ ಬೆಳಸುತ್ತಿರುವ ಸಮಯದಲ್ಲಿ ವಿಜಯಪುರದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪತ್ನಿಯರು, ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಸ್ವಗ್ರಾಮ ಆದಾಪುರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.