ಪ್ರಮೋದ
ಕೊಪ್ಪಳ: ‘ಪರಿಸರ ನಾಶ ಮಾಡಿದ್ದೇವೆ, ಹೀಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ‘ ಎನ್ನುವ ದೂರು ಸಾಮಾನ್ಯವಾಗುತ್ತಿದೆ. ವರ್ಷಗಳು ಉರುಳಿದಂತೆಲ್ಲ ಹೆಚ್ಚಾಗಬೇಕಿದ್ದ ಜಿಲ್ಲೆಯ ಅರಣ್ಯ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈಗ ಶೇ 0.6ರಷ್ಟು ಮಾತ್ರ ಜಿಲ್ಲೆಯ ಅರಣ್ಯಪ್ರದೇಶವಿದ್ದು, ಇದನ್ನು ಹೆಚ್ಚಿಸಬೇಕಾಗಿದೆ.
ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ವಾರ್ಷಿಕ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ನೆಟ್ಟ ಸಸಿಗಳ ಪೈಕಿ ಅರ್ಧದಷ್ಟಾದರೂ ಬೆಳೆದರೆ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಬಹುದು. ನಿರ್ವಹಣೆ ಕೊರತೆಯಿಂದ ಅರಳುವ ಮೊದಲೇ ಸಸಿಗಳು ಬಾಡಿ ಹೋಗುತ್ತಿವೆ.
ಈ ಬಾರಿ ‘ನನ್ನ ಗಿಡ ನನ್ನ ಹೆಮ್ಮೆ’ ಎನ್ನುವ ಶೀರ್ಷಿಕೆಯಡಿ ವನಮಹೋತ್ಸವ ಸಪ್ತಾಹ ಇತ್ತೀಚೆಗೆ ನಡೆಸಲಾಗಿದೆ. ಅರಣ್ಯ ಇಲಾಖೆ ವತಿಯಿಂದ ಮಾವು, ನೇರಳೆ, ಬಿದಿರು, ಶ್ರೀಗಂಧ, ಬೇವು, ಹೆಬ್ಬೇವು, ಪೇರಲ, ಕರಿಬೇವು ಮಾಗಣಿ, ಬಸರಿ, ಹೊಂಗೆ ಹೀಗೆ ಅನೇಕ ಸಸಿಗಳನ್ನು ಹಾಗೂ ಬೀಜದುಂಡೆಗಳನ್ನು ಬೆಳೆಸಲಾಗುತ್ತಿದೆ. ಸಾರ್ವಜನಿಕ ಉದ್ದೇಶಕ್ಕೆ ಕೆಲ ಸಸಿಗಳನ್ನು ಉಚಿತವಾಗಿ ನೀಡಿದರೆ, ಇನ್ನೂ ಕೆಲ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಸಸಿಗಳನ್ನು ನೀಡಲಾಗುತ್ತಿದೆ.
ನೆಡು ತೋಪು ಕಾವಲುಗಾರರು ವರ್ಷ ಪೂರ್ತಿ ಸಸಿಗಳನ್ನು ಜತನದಿಂದ ಕಾಯುತ್ತಿದ್ದು ಪ್ರತಿದಿನ ಅವುಗಳ ರಕ್ಷಣೆ ಮಾಡಿ ಬೆಳೆಸುತ್ತಿದ್ದಾರೆ.ಜಂಬುನಾಥ ಹಕಾರಿ, ಕೊಪ್ಪಳ ಅರಣ್ಯ ರಕ್ಷಕ
ಮರೆಯಾದ ಹಳಿ ಸಂಸ್ಕೃತಿ
ಕುಷ್ಟಗಿ ತಾಲ್ಲೂಕಿನ ಪಶ್ಚಿಮ ಭಾಗದ ನಿಲೋಗಲ್, ರಾಂಪುರ, ವಕ್ಕಂದುರ್ಗ, ಮಾಲಗಿತ್ತಿ ಸುತ್ತಲಿನ ಪ್ರದೇಶಗಳಿಗೆ ಹೋದರೆ ಅಲ್ಲಿನ ನೈಸರ್ಗಿಕ ಸುಂದರ ಗುಡ್ಡಬೆಟ್ಟ, ಗಿಡಮರಗಳ ಗುಂಪು, ದಟ್ಟ ಅರಣ್ಯ ಪ್ರದೇಶ ತರಹೇವಾರಿ ಹಕ್ಕಿಗಳ ಕಲರವ, ವಿವಿಧ ನಿಶಾಚರಿ ಪ್ರಾಣಿಗಳ ಹಿಂಡು ನೋಡಿದರೆ ಮಲೆನಾಡಿನ ಅನುಭವ ಬರುತ್ತದೆ. ತಾವರಗೇರಾ ಬಳಿ ಕುಮಾರಖೇಡಾ ಪ್ರದೇಶದಲ್ಲೂ ಇಂಥ ದೃಶ್ಯ ಕಂಡುಬರುತ್ತದೆ. ಆದರೆ ಉಳಿದ ಕಡೆಗಳಲ್ಲಿ ಬರೀ ಬಯಲು, ಸಣ್ಣಗಿಡಗಳನ್ನೂ ಕಡಿದು ಮಾರಾಟ ಮಾಡಲಾಗುತ್ತಿದೆ.
ಅರಣ್ಯ ಸಂರಕ್ಷಣೆ ವಿಷಯ ಸಾರ್ವಜನಿಕರಲ್ಲಿ ಭಾವನಾತ್ಮಕವಾಗಿಲ್ಲ. ಆದಷ್ಟು ಮರಗಳನ್ನು ಕಡಿದು ಹಾಳು ಮಾಡುವ ಮೂಲಕ ವಿಕೃತಿ ಮನೋಭಾವ ಹೆಚ್ಚುತ್ತಿರುವುದು ಆತಂಕದ ಸಂಗತಿ ಎಂಬುದು ಅರಣ್ಯ ಇಲಾಖೆಯವರ ನೋವಿನ ನುಡಿ. ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ಇಲ್ಲದೆ ಅರಣ್ಯ ಪ್ರದೇಶ ವಿಸ್ತರಣೆ ಅಸಾಧ್ಯ ಎನ್ನುತ್ತಾರೆ ಸಿಬ್ಬಂದಿ.
ಕೋಟಿ ವೃಕ್ಷ ಅಭಿಯಾನದಡಿ ಗ್ರಾ.ಪಂಗಳಲ್ಲಿ ಲಭ್ಯವಿರುವ ಸಸಿಗಳನ್ನ ಎಲ್ಲರೂ ತೆಗೆದುಕೊಂಡು ಬಂದು ಮನೆ ಸಾರ್ವಜನಿಕ ಸ್ಥಳದಲ್ಲಿ ನೆಟ್ಟು ಪೋಷಣೆ ಮಾಡಿದರೆ ಪರಿಸರ ವೃದ್ಧಿಯಾಗುತ್ತದೆ.ಮಹಮ್ಮದ್ ರಫಿ, ಪರಿಸರ ಪ್ರೇಮಿ, ಶ್ರೀರಾಮನಗರ
ಪ್ರತಿವರ್ಷ ಅರಣ್ಯ ಬ್ಲಾಕ್‌ಗಳಲ್ಲಿ ಸಸಿಗಳನ್ನು ನಾಟಿ ಮಾಡಲಾಗುತ್ತಿದ್ದರೂ ಶೇ 25ರಷ್ಟು ಯಶಸ್ವಿಯಾಗುತ್ತಿಲ್ಲ. ಜನರ ಅಸಹಕಾರ, ಮೂರು ವರ್ಷ ಮಾತ್ರ ಅವುಗಳ ನಿರ್ವಹಣೆಗೆ ಇಲಾಖೆ ಅವಕಾಶ ನೀಡಿರುತ್ತದೆ. ಮೂರು ವರ್ಷ ಕಳೆದ ನಂತರ ಅರಣ್ಯ ಇಲಾಖೆ ಕಾವಲುಗಾರರು ಇರುವುದಿಲ್ಲ. ಹಾಗಾಗಿ ಕುರಿ, ದನ ತಿನ್ನಲಾರದ ಹೊಂಗೆ, ತಪಸಿ ಜಾತಿಯ ಸಸಿಗಳು ಮಾತ್ರ ಅಲ್ಲಲ್ಲಿ ಉಳಿದಿರುತ್ತವೆ ಎಂಬುದು ಅರಣ್ಯ ಇಲಾಖೆಯ ಅಂಬೋಣ.
ಬಾರದ ಮಳೆ–ಸಸಿ ನೆಡಲು ಹಿನ್ನಡೆ
ಕುಕನೂರು ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸಲು, ಮಳೆಯ ಪ್ರಮಾಣವನ್ನು ಹೆಚ್ಚಿಸಲು ಮರಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆ ಅಂಗವಾಗಿ ಜಲಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಪಂಚ ಅಭಿಯಾನ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇರುವ ಅರಣ್ಯವನ್ನು ರಕ್ಷಿಸಿಕೊಳ್ಳುವ ಜೊತೆಗೆ ಅರಣ್ಯ ಭಾಗದಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಸಸಿಗಳನ್ನು ನೆಡುವುದೂ ಅಷ್ಟೇ ಮುಖ್ಯ.ರುದ್ರಮ್ಮ ಎಸ್.ಗಣವಾರಿ, ಅಕ್ಕಮಹಾದೇವಿ ಮಹಿಳಾ ಮಂಡಳಿ, ಹುಲಿಗಿ
ವಿಪತ್ತು ನಿರ್ವಹಣೆ, ಹಸರೀಕರಣ, ಕೊಳವೆ ಭಾವಿ ಪುನಶ್ಚೇತನ, ಹಸಿರು ಸರೋವರ, ಜೈವಿಕ ಅನಿಲ ಸೃಷ್ಠಿ ಅಭಿಯಾನ ಹಮ್ಮಿಕೊಂಡು ವಿಶ್ವ ಪರಿಸರ ದಿನಾಚರಣೆ, ವಿಶ್ವ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ದಿನ, ರಾಷ್ಟ್ರೀಯ ಹಬ್ಬಗಳ ದಿನಗಳಂದು ಅರಣ್ಣೀಕರಣ ಕೆಲಸ ಮಾಡಲಾಗಿದೆ. ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ಅಮೃತ ಸರೋವರದ ಸುತ್ತ ಸಸಿ ನೆಡಲಾಗಿದೆ.
ಕಾರಟಗಿ ಪಟ್ಟಣದ ವಿವಿಧೆಡೆ ಸಸಿ ನೆಡಲು ಗುಂಡಿ ತೋಡಿರುವುದು ಪ್ರವಾಸಿ ಮಂದಿರ, ತಾಲ್ಲೂಕು ಪಂಚಾಯಿತಿ, ಅಗ್ನಿಶಾಮಕ ಠಾಣೆ ಸಹಿತ ವಿವಿಧೆಡೆ ಕಂಡುಬಂದಿದೆಯಾದರೂ ಮಳೆ ಬಾರದೇ ಸಸಿ ನೆಡುವುದಕ್ಕೆ ಹಿನ್ನಡೆಯಾಗಿದೆ. ವನಸಿರಿ ಫೌಂಡೇಶನ್ ಕೆಲ ದಿನಗಳ ಹಿಂದೆ ಪರಿಸರ ಜಾಗೃತಿ ಮೂಡಿಸಿ, ಸಸಿಗಳನ್ನು ಉಚಿತವಾಗಿ ವಿತರಿಸಿದ್ದನ್ನು ಬಿಟ್ಟರೆ, ಸಸಿ ನೆಡುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ. ಅಭಿವೃದ್ದಿ ನೆಪದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮುಂಭಾಗ ಹಾಗೂ ಆವರಣದಲ್ಲಿಯ ಬೆಳೆದ ಗಿಡಗಳನ್ನು ಕತ್ತರಿಸಲಾಗಿದೆ. ಆಂಧ್ರ ಮೂಲದವರು ಪ್ರತಿ ವರ್ಷದಂತೆ ತರೇಹವಾರಿ ಸಸಿಗಳೊಂದಿಗೆ ವಲಿಸಾಹೇಬ ದರ್ಗಾದ ಎದುರಿಗೆ ಠಿಕಾಣಿ ಹೂಡಿದ್ದರೂ ಮಾರಾಟ ಪ್ರತಿ ವರ್ಷದಂತೆ ಇಲ್ಲ.
ಪರಿಸರ ಸಂರಕ್ಷಣೆ ಬಾಯಿಮಾತಿಗೆ ಸೀಮಿತವಾಗುವ ಬದಲು ನೈಜವಾದ ಕೆಲಸ ಆಗಬೇಕಾಗಿದೆ. ಸಸಿ ನೆಡುವಲ್ಲಿನ ಆಸಕ್ತಿ ಪೋಷಣೆಯಲ್ಲಿಯೂ ಇರಬೇಕಿದೆ.ಬಾಳಪ್ಪ ವೀರಾಪೂರ, ಮುಖ್ಯಸ್ಥರು, ಕರುನಾಡ ಪರಿಸರ ಸಂರಕ್ಷಣಾ ವೇದಿಕೆ, ಯಲಬುರ್ಗಾ
ಇಲಾಖೆ ಮುತುವರ್ಜಿ
ಅಳವಂಡಿ-ಹಂದ್ರಾಳ ರಸ್ತೆ, ಅಳವಂಡಿ-ಘಟ್ಟಿರಡ್ಡಿಹಾಳ ರಸ್ತೆ, ಕವಲೂರು-ಮುರ್ಲಾಪುರ ರಸ್ತೆ, ಕವಲೂರು-ಘಟ್ಟಿರಡ್ಡಿಹಾಳ ರಸ್ತೆ, ಕವಲೂರು-ಹಂದ್ರಾಳ ರಸ್ತೆ, ಬೆಳಗಟ್ಟಿ-ಹೈದರನಗರ ರಸ್ತೆ ಮುಂತಾದ ರಸ್ತೆಯ ಎರಡು ಬದಿ ಸುಮಾರು 7 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ನೆಡುತೋಪು ಕಾವಲುಗಾರರಾಗಿ ಮಹೇಶ ಪೂಜಾರ, ರವಿ ಜೋಗಿನ, ಶೀಮಣ್ಣ ತಳವಾರ, ಈಶಪ್ಪ ಕುಂಬಾರ ಸಸಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೋಟಿ ವೃಕ್ಷ ಅಭಿಯಾನ ಪ್ರತಿ ವರ್ಷ ಮಳೆಗಾಲ ಬಂತೆಂದರೆ ಆರಂಭವಾಗುತ್ತದೆ. ಬೇಸಿಗೆಯಲ್ಲಿ ಪಾಲನೆ ಕೊರತೆಯಿಂದ ಸಸಿ ಬಾಡಿ ಹೋಗಿರುತ್ತವೆ.ಅಶೋಕ್ ಚನಪಹಳ್ಳಿ ಕುಕನೂರು
ಗಂಗಾವತಿ : ಸಸಿಗಳ ನಿರ್ವಹಣೆ; ಮನೆಯವರದ್ದೇ ಜವಾಬ್ದಾರಿ
ತಾಲ್ಲೂಕಿನ 18 ಗ್ರಾ.ಪಂಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಸಿ ವಿತರಿಸಲಾಗುತ್ತದೆ. ಗ್ರಾಮೀಣ ಭಾಗವನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ಸರ್ಕಾರ ಕೋಟಿ ವೃಕ್ಷ ಅಭಿಯಾನ ಜಾರಿ ಮಾಡಿದೆ. ಇದರನ್ವಯ ಗ್ರಾ.ಪಂಗಳಲ್ಲಿನ ಸಮುದಾಯ ಭವನ ಆಸ್ಪತ್ರೆ ಶಾಲೆ ಸೇರಿ ಸಾರ್ವಜನಿಕರ ಸ್ಥಳದಲ್ಲಿ ಸಸಿನೆಟ್ಟು ನಿರ್ವಹಣೆ ಮಾಡಬೇಕಾಗಿದೆ. ಮನೆಗಳ ಬಳಿ ನೆಟ್ಟ ಸಸಿಗಳ ಪೋಷಣೆಯ ಸಂಪೂರ್ಣ ಜವಾಬ್ದಾರಿ ಅವರ ಮನೆಯವರದ್ದೇ ಆಗಿರುತ್ತದೆ ಎಂದು ಗಂಗಾವತಿ ತಾಲ್ಲೂಕು ಇಒ ಮಹಾಂತಗೌಡ ಪಾಟೀಲ ತಿಳಿಸಿದರು.
ಸೀಡ್‌ಬಾಲ್ ಪದ್ಧತಿ
ಜಿಲ್ಲೆಯ ಹಸಿರೀಕರಣಕ್ಕೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಪ್ರಯತ್ನ ಮಾಡುತ್ತಿದೆ. ಬೀಜದ ಉಂಡೆ (ಸೀಡ್‌ಬಾಲ್) ಪದ್ದತಿ ಅಳವಡಿಸಿಕೊಂಡಿದೆ.
ಬೇಸಿಗೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಗಿಡಗಳ ಸುತ್ತಲೂ ಬೆಳೆದ ಕಸವನ್ನು ಮುಂಗಡವಾಗಿ ಸುಟ್ಟು ರಕ್ಷಣೆ ಮಾಡಿ ಬೆಳೆಸುತ್ತಿದ್ದಾರೆ.ತೋಟಯ್ಯ ಅರಳೆಲೆಮಠ, ಗ್ರಾಮಸ್ಥ ಅಳವಂಡಿ
ಸಸಿಗಳ ನಿರ್ವಹಣೆಗೆ ಆದ್ಯತೆ
ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ಯೋಜನೆ ಮೂಲಕ ಜಿಲ್ಲೆಯಲ್ಲಿ ಸಸಿಗಳನ್ನು ಬೆಳೆಸಲು ವನ ಮಹೋತ್ಸವದಂಥ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ನರ್ಸರಿಯಲ್ಲಿ 4.50 ಲಕ್ಷ ಬೀಜದುಂಡೆಗಳು ಇವೆ. ಸಸಿಗಳ ನಿರ್ವಹಣೆಯನ್ನೂ ನಮ್ಮ ಇಲಾಖೆಯಿಂದಲೇ ಮಾಡಲಾಗುತ್ತದೆ. ಕಳೆದ ವರ್ಷ 43 ಕಿ.ಮೀ. ವರೆಗೆ ಸಸಿಗಳನ್ನು ನೆಡಲಾಗಿದೆ. ಕಾವ್ಯಾ ಚತುರ್ವೇದಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ
ಪೂರಕ ಮಾಹಿತಿ: ಕೆ. ಮಲ್ಲಿಕಾರ್ಜುನ, ನಾರಾಯಣರಾವ ಕುಲಕರ್ಣಿ, ಮಂಜುನಾಥ ಎಸ್. ಅಂಗಡಿ, ಗುರುರಾಜ ಅಂಗಡಿ, ಉಮಾಶಂಕರ ಹಿರೇಮಠ, ಜುನಾಸಾಬ ವಡ್ಡಟ್ಟಿ, ವಿಜಯ ಎನ್., ಶರಣಬಸವ ನವಲಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.