ADVERTISEMENT

ಯಶಸ್ಸಿನ ವ್ಯಾಖ್ಯಾನವೇ ಸಾಧನೆಗೆ ಮೊದಲ ಮೆಟ್ಟಲು: ಮಂಜುನಾಥ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:22 IST
Last Updated 26 ಜುಲೈ 2024, 15:22 IST
ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಮಾತನಾಡಿದರು
ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಮಾತನಾಡಿದರು   

ಕೊಪ್ಪಳ: ‘ಸಾಧನೆಯ ತುಡಿತ ಹೊಂದಿರುವವರಿಗೆ ಯಶಸ್ಸು ಎಂದರೇನು ಎನ್ನುವುದು ನಿಖರವಾಗಿ ಗೊತ್ತಿರಬೇಕು. ಬದುಕಿನಲ್ಲಿ ಯಶಸ್ಸಿನ ಅರ್ಥವೇ ಗೊತ್ತಿಲ್ಲವಾದರೆ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ’ ಎಂದು ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಹೇಳಿದರು.

ತಮ್ಮ ಎರಡು ತಾಸಿನ ಮಾತಿನಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಸಾಧನೆಗೆ ಪ್ರೇರಣೆ ತುಂಬಿ ಯಶಸ್ಸಿನ ಮೆಟ್ಟಿಲು ಹೇಗೆ ಏರಬೇಕು ಎನ್ನುವುದನ್ನು ಅವರು ಹೇಳಿಕೊಟ್ಟರು. ‘ಯಾರಿಗೆ ಯಾವುದು ಬೇಕಾಗಿದೆಯೊ ಅಥವಾ ಬೇಕಿನಿಸುತ್ತದೆಯೊ ಅದನ್ನು ಪಡೆದುಕೊಳ್ಳುವುದೇ ಯಶಸ್ಸು’ ಎಂದು ವ್ಯಾಖ್ಯಾನಿಸಿದರು.

‘20 ವರ್ಷ ಶಾಲಾ, ಕಾಲೇಜುಗಳಲ್ಲಿ ಓದಿದ ಬಳಿಕವೂ ಬದುಕಿನ ಗಮ್ಯದ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಇಂಗ್ಲಿಷ್‌ ಗೊತ್ತಿಲ್ಲ, ಓದಿದ್ದು ನೆನಪಿನಲ್ಲಿ ಉಳಿಯುವುದಿಲ್ಲ, ಇದು ನಮ್ಮಿಂದ ಸಾಧ್ಯವಿಲ್ಲ ಎನ್ನುವ ನಕಾರಾತ್ಮಕ ಮನೋಭಾವನೆಯಿಂದ ಹೊರಬಂದು ನಾನಿದನ್ನು ಮಾಡಬಲ್ಲೆ ಎಂದು ದೃಢವಾಗಿ ಹೇಳುವ ಆತ್ಮಬಲ ಬೇಕು. ವಯಸ್ಸು ಇದ್ದಾಗ ಸಾಧನೆಗೆ ಮನಸ್ಸು ಮಾಡುವುದಿಲ್ಲ. ಸಾಧನೆಗೆ ಮನಸ್ಸು ಮಾಡಿದಾಗ ವಯಸ್ಸು ಇರುವುದಿಲ್ಲ. ಹೀಗಾಗಬಾರದು’ ಎಂದರು.

ADVERTISEMENT

‘ಸಾಧನೆಯ ಹಾದಿಯಲ್ಲಿ ಒಳ್ಳೆಯ ನಡತೆ, ಉತ್ತಮ ಮೌಲ್ಯ ಸಂಪಾದಿಸಬೇಕು. ಹಣವೂ ಬೇಕು. ಜೀವನದಲ್ಲಿ ಏನಾದರೂ ಗಳಿಸಿಕೊಳ್ಳಲು ಒಂದಷ್ಟು ಕಳೆದುಕೊಳ್ಳಬೇಕಾಗುತ್ತದೆ. ಸ್ಪರ್ಧಾತ್ಮಕ ಸವಾಲಿನಲ್ಲಿ ಕೌಶಲವಿಲ್ಲದಿದ್ದರೆ ಯಾವ ಸಾಧನೆಯೂ ಸಾಧ್ಯವಿಲ್ಲ. ನಮ್ಮ ಸಾಧನೆಯ ಓಟದಲ್ಲಿ ಇನ್ನೊಬ್ಬರನ್ನು ತುಳಿಯುವ ಕೆಲಸ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

‘ಸಮಯವನ್ನು ಸರಿಯಾಗಿ ಹೊಂದಿಸಿಕೊಳ್ಳುವುದು, ತಲುಪಬೇಕಾದ ಗುರಿಯ ಬಗ್ಗೆ ಸ್ಪಷ್ಟತೆ, ರಜೆಯನ್ನೂ ಲೆಕ್ಕಿಸದೇ ಶ್ರಮಪಡುವ ಬದ್ಧತೆ, ಸುಲಭ ವಿಷಯವನ್ನು ಹೆಚ್ಚು ವೇಗದಲ್ಲಿ ಓದುವ ಕೌಶಲ, ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಶೂಟಿಂಗ್ ಕ್ರೀಡೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎರಡೂ ಒಂದೇ ಆಗಿದ್ದು, ನಿಖರವಾಗಿ ಗುರಿ ಹಿಡಿದರೆ ಮಾತ್ರ ಪೂರ್ಣ ಅಂಕ ಗಳಿಸಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಸವಾಲಿಗೆ ‘ಮಂಜುನಾಥ’ ಸೂತ್ರಗಳು

* ನಾಲ್ಕು ತಿಂಗಳು ಪಟ್ಟು ಹಿಡಿದು ಓದಿದರೆ ಎಸ್‌ಡಿಎ ಎಫ್‌ಡಿಎ ಪರೀಕ್ಷೆ ಉತ್ತೀರ್ಣವಾಗಲು ಸಾಧ್ಯ.

* ಗುರಿ ನಿರ್ದಿಷ್ಟವಾಗಿದ್ದರಷ್ಟೇ ಆ ಮಾರ್ಗದಲ್ಲಿ ಸಾಗುತ್ತೇವೆ. ಆದಷ್ಟು ಬೇಗನೆ ಗುರಿ ನಿರ್ಧರಿಸಿಕೊಳ್ಳಿ.

* ಸಮಯ ನಿರ್ವಹಣೆ ಹಾಗೂ ಸಂವಹನ ಕೌಶಲ ಗಳಿಸಿಕೊಳ್ಳಬೇಕು.

* ಎದುರಿಗಿನ ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ನೀವು ನೀವಾಗಿರುವ ಸಕಾರಾತ್ಮಕ ವ್ಯಕ್ತಿತ್ವ ರೂಢಿಸಿಕೊಳ್ಳಿ.

* ನೀವು ಜನಿಸುವ ಮೊದಲೇ ತೆರೆಕಂಡ ಸಿನಿಮಾದ ಹಾಡು ನಿಮಗೆ ನೆನಪಿನಲ್ಲಿ ಉಳಿಯಬಹುದಾದರೆ ನೀವೇ ಓದಿದ ಪುಸ್ತಕದ ಸಾಲುಗಳು ನೆನಪಿನಲ್ಲಿ ಇಟ್ಟುಕೊಳ್ಳಲು ಯಾಕೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ಹಾಗೂ ಗುರಿ ಬಗ್ಗೆ ಗಂಭೀರತೆ ಅಗತ್ಯ.

* ಅತಿಯಾಗಿ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಅನಾರೋಗ್ಯಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರ ಬಗ್ಗೆ ಎಚ್ಚರ ವಹಿಸಿ.

* ನಮ್ಮ ದೌರ್ಬಲ್ಯಗಳು ಏನು ಹಾಗೂ ನಾವೇ ಸರಿಯಿಲ್ಲ ಎನ್ನುವುದು ಗೊತ್ತಿದ್ದರೂ ಅದನ್ನು ಸರಿಪಡಿಸಿಕೊಳ್ಳುವುದಿಲ್ಲ. ಈ ರೀತಿಯ ಮನಸ್ಥಿತಿಯಿಂದ ಹೊರಬಂದು ಬದಲಾಗಬೇಕು.

* ನಕಾರಾತ್ಮಕ ವಿಷಯಗಳನ್ನು ಎಷ್ಟು ತುಳಿಯುತ್ತೇವೆಯೊ ನಾವು ಅಷ್ಟು ಮೇಲಕ್ಕೆ ಏರುತ್ತೇವೆ. ಆಹಾರದ ವಿಷಯದಲ್ಲಿ ಇನ್ನೂ ಬೇಕು ಎನ್ನುತ್ತಿರುವಾಗಲೇ ಮುಗಿಸಬೇಕು. ಬೆಳೆಯುವುದೇ ಅಭ್ಯಾಸವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.