ADVERTISEMENT

ಕೊಪ್ಪಳ | ಮರಕುಂಬಿ ಪ್ರಕರಣ: ಅಸ್ವಸ್ಥಗೊಂಡಿದ್ದ ಅಪರಾಧಿ ಸಾವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 4:50 IST
Last Updated 25 ಅಕ್ಟೋಬರ್ 2024, 4:50 IST
<div class="paragraphs"><p>ರಾಮಣ್ಣ ಲಕ್ಷ್ಮಣ ಭೋವಿ</p></div>

ರಾಮಣ್ಣ ಲಕ್ಷ್ಮಣ ಭೋವಿ

   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ನಡೆದಿದ್ದ ಜಾತಿ ಸಂಘರ್ಷ ಪ್ರಕರಣದಲ್ಲಿ ಅಪರಾಧಿಯಾಗಿದ್ದ ರಾಮಣ್ಣ ಲಕ್ಷ್ಮಣ ಭೋವಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 101 ಜನ ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಲಾಗಿದೆ. ಇನ್ನುಳಿದ ಮೂವರಿಗೆ ಐದು ವರ್ಷ ಜೈಲು ಹಾಗೂ ತಲಾ ₹2,000 ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯ ಗುರುವಾರ ಆದೇಶ ನೀಡಿತ್ತು. 100 ಜನರನ್ನು ಬಳ್ಳಾರಿ ಜೈಲಿಗೆ ಗುರುವಾರ ರಾತ್ರಿಯೇ ಕಳುಹಿಸಲಾಗಿದೆ.

ADVERTISEMENT

ಅನಾರೋಗ್ಯದಿಂದ ಬಳಲುತ್ತಿದ್ದ ರಾಮಣ್ಣ ಭೋವಿ ಅವರನ್ನು ಗುರುವಾರ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಾಗ ಅಸ್ವಸ್ಥರಾಗಿದ್ದರು. ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ನ್ಯಾಯಾಲಯದ ಶಿಕ್ಷೆ ಆದೇಶ ಪ್ರಕಟವಾದ ಬಳಿಕ ರಾಮಣ್ಣ ಅವರನ್ನು ನ್ಯಾಯಾಲಯದಿಂದ ನೇರವಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಅಪರಾಧಿಯಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಕುರಿತು ಜೈಲು ಅಧೀಕ್ಷಕರು ದೂರು ನೀಡಲಿದ್ದಾರೆ. ನಮ್ಮ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಪ್ರಜಾವಾಣಿಗೆ ತಿಳಿಸಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿ ಕಟ್ಟೆಯೊಡೆದ ದುಃಖ

ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದಿದ್ದ ಜಾತಿ ಸಂಘರ್ಷ ಪ್ರಕರಣದಲ್ಲಿ ಅಪರಾಧಿಯಾಗಿ ಮೃತಪಟ್ಟಿರುವ ರಾಮಣ್ಣ ಭೋವಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರು ಕಣ್ಣೀರ ಕಟ್ಟೆ ಒಡೆಯಿತು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ರಾಮಣ್ಣ ಮೃತದೇಹ ಇರಿಸಲಾಗಿದ್ದು, ಅವರ ಪತ್ನಿ ‌ಕಾವೇರಿ ಆಸ್ಪತ್ರೆಗೆ ಬಂದವರೇ ಬಿಕ್ಕಿ ಬಿಕ್ಕಿ ಅತ್ತರು. ಸಂಬಂಧಿಕರು ಸಮಾಧಾನ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ‌.

ರಾಮಣ್ಣ ಭೋವಿ ಕುಟುಂಬಸ್ಥರ ಆಕ್ರಂದನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.