ADVERTISEMENT

ಕೊಪ್ಪಳ | ಮರಕುಂಬಿಯಲ್ಲಿ ಮುಂದುವರಿದ ನೀರವ ಮೌನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 13:40 IST
Last Updated 13 ನವೆಂಬರ್ 2024, 13:40 IST
<div class="paragraphs"><p>ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿಯ ಬೀದಿ ಬಿಕೋ ಎನ್ನುತ್ತಿದೆ</p></div>

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿಯ ಬೀದಿ ಬಿಕೋ ಎನ್ನುತ್ತಿದೆ

   

ಪ್ರಜಾವಾಣಿ ಚಿತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ದಶಕದ ಹಿಂದೆ ನಡೆದ ದಲಿತರ ಹಾಗೂ ಪ್ರಬಲ ಸಮುದಾಯದವರ ನಡುವಿನ ಜಾತಿ ಸಂಘರ್ಷ, ಹಿಂಸಾಚಾರ ಪ್ರಕರಣದ ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದ್ದರೂ ಮರಕುಂಬಿ ಗ್ರಾಮದ ಜನರಲ್ಲಿ ಜೀವಕಳೆ ಕಾಣಲಿಲ್ಲ.

ADVERTISEMENT

ಗ್ರಾಮಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಬುಧವಾರ ಭೇಟಿ ನೀಡಿದಾಗ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ವಿಷಯವೇ ಬಹಳಷ್ಟು ಜನಕ್ಕೆ ತಿಳಿದಂತೆ ಕಾಣಲಿಲ್ಲ. ಕೆಲವರು ಒಬ್ಬರ ಮಾತು ಮೂರನೇ ವ್ಯಕ್ತಿಗೆ ಕೇಳದಷ್ಟು ಗ್ರಾಮದ ಕಟ್ಟೆಗಳಿಗೆ ಕುಳಿತುಕೊಂಡು ಚರ್ಚೆ ನಡೆಸುತ್ತಿರುವ ದೃಶ್ಯಗಳು ಕಂಡು ಬಂದವು.

ಗ್ರಾಮದ ಬಹುತೇಕ ಕುಟುಂಬಗಳ ಮನೆಯ ಯಜಮಾನರು ಜೈಲುವಾಸ ಅನುಭವಿಸುತ್ತಿರುವ ಕಾರಣ, ಕಟಾವು ಹಂತಕ್ಕೆ ಬಂದಿರುವ ಭತ್ತದ ಬೆಳೆಗಳಲ್ಲಿ ಕೆಲಸ ಮಾಡಲು ಮಹಿಳೆಯರೇ ತೆರಳಿದ್ದ ಚಿತ್ರಣ ಕಂಡುಬಂದಿತು. ಬೆಳಿಗ್ಗೆ ಬೇಗನೆ ಹೊರಟರೆ ಸೂರ್ಯೋದಯದ ಬಳಿಕವೇ ಗದ್ದೆಯ ಕೆಲಸ ಮುಗಿಸಿ ಬರುತ್ತಿದ್ದಾರೆ. ಕೆಲ ಯುವಕರು ಭತ್ತ ಒಣಗಿಸುವ, ಹುಲ್ಲಿನ ಬಣಿವೆ ಹಾಕುವ ಕಾರ್ಯಗಳಲ್ಲಿ ತೊಡಗಿದದ್ದರು.

ಒಟ್ಟು 101 ಆರೋಪಿಗಳು ಅಪರಾಧಿಗಳು ಎಂದು ಕೊಪ್ಪಳ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ ಬಳಿಕದಿಂದಲೂ ಗ್ರಾಮದಲ್ಲಿ ಜೀವಕಳೆಯೇ ಮಾಯವಾಗಿದೆ. ವೃದ್ದರು ಮಾತ್ರ ಗ್ರಾಮದ ಬಂಡೆ, ಗಿಡಗಳ ಕೆಳಗೆ ಕುಳಿತು ಪರಸ್ಪರ ಮಾತನಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಗ್ರಾಮದಲ್ಲಿ ಎಂದಿನಂತೆ ನೀರವ ಮೌನ ಆವರಿಸಿತ್ತು. ದಲಿತರ ಓಣಿಗಳಲ್ಲಿಯೂ ಅಷ್ಟೊಂದು ಜನಸಂದಣಿ ಕಾಣಲಿಲ್ಲ. ಶಾಲೆಗೆ ಎಂದಿನಂತೆ ಮಕ್ಕಳು ಹಾಜರಾಗಿದ್ದರು.

ತೀರ್ಪು ಪ್ರಕಟವಾದ ದಿನದಿಂದಲೂ ಪೊಲೀಸರು ಸರತಿಯ ಮೇಲೆ ದಿನದ 24 ಗಂಟೆಯೂ ಕರ್ತವ್ಯದಲ್ಲಿ ತೊಡಗಿದ್ದಾರೆ. ಅವರು ಶಾಲೆಯ ಮುಂಭಾಗದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಬುಧವಾರ ಗ್ರಾಮದಲ್ಲಿ ಸಂಜೆಯವರೆಗೆ ಜನರ ಸುಳಿವು ಕಾಣಲಿಲ್ಲ. ಘಟನೆ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಅಪರಾಧಿಗಳನ್ನು ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿದ್ದು, ಈಗ ಜಾಮೀನು ಮಂಜೂರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.