ಮುನಿರಾಬಾದ್: ಸಮೀಪದ ಕಂಪಸಾಗರ ಗ್ರಾಮದಲ್ಲಿರುವ ಭ್ರಮರಾಂಬಾದೇವಿ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ 8ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆದವು.
ಬೆಳಿಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಅಲಂಕಾರ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ಸೋಮಯ್ಯ ಸ್ವಾಮಿ ಹಿರೇಮಠ ಮತ್ತು ಶಿವಯ್ಯ ಸ್ವಾಮಿ ಹಿರೇಮಠ ಅವರ ನೇತೃತ್ವದಲ್ಲಿ 4 ಜೋಡಿ ವಧು–ವರರು ಸತಿಪತಿಗಳಾದರು.
ಸಾನ್ನಿಧ್ಯ ವಹಿಸಿದ್ದ ಡಿ.ಅಂತಪುರ ಶ್ರೀಶೈಲ ಶಾಖಾಮಠದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘ಶ್ರೀಮಠದ ನಾಗಯ್ಯ ಸ್ವಾಮೀಜಿ ಅವರು ದಾನಿಗಳ ಸಹಕಾರದಿಂದ ನಾಲ್ಕು ಜೋಡಿ ಬಡವರ ಮದುವೆ ಮಾಡಿದ್ದು ಶ್ಲಾಘನೀಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಗಯ್ಯ ಸ್ವಾಮೀಜಿ ಮಾತನಾಡಿ, ‘ಭಕ್ತರು ನೂತನ ದೇವಸ್ಥಾನ ನಿರ್ಮಿಸುವ ಸಂಕಲ್ಪ ಮಾಡಿದ್ದು, ದಾನಿಗಳ ಸಹಕಾರದೊಂದಿಗೆ ಹೊಸ ರೂಪದಲ್ಲಿ ಕಲ್ಲಿನ ಕಟ್ಟಡ ಮತ್ತು ಕಲ್ಯಾಣ ಮಂಟಪ ನಿರ್ಮಾಣವಾಗಲಿದೆ’ ಎಂದರು.
ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರು, ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ಗಣ್ಯರಾದ ಎ.ಧರ್ಮರಾಜ ರಾವ್, ಹುಲುಗಪ್ಪ ಚೌರದ, ಮರಿಯಪ್ಪ ವಿ., ಶಾಂತರಾಜ ಜೈನ್, ಮಾರುತಿ, ಜಂಬಣ್ಣ, ಹನುಮಂತಪ್ಪ ಈಳಿಗೇರ್, ಶಂಕ್ರಪ್ಪ ಅಳ್ಳಳ್ಳಿ, ಫಕೀರಪ್ಪ, ಬೆಳ್ಳೆಪ್ಪ ಚೌರದ, ಲಾಭಣ್ಣ ಬಡಿಗೇರ್, ಮಾರುತಿ ದೊಡ್ಡಮನಿ, ಹಂಪಯ್ಯ ಸ್ವಾಮಿ ಮೆತ್ತಗಲ್, ಮಂಜುನಾಥ ಸಿಂಧೋಗಿ, ರಾಮಣ್ಣ ಇದ್ದರು.
ನಾಗರತ್ನ ಪೂಜಾರ, ಸರಸ್ವತಿ ಮತ್ತು ಶಾರದಾ ಸಂಗೀತ ಬಳಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಕವಿ ವಿರೂಪಾಕ್ಷಿ ಎಂ.ಯಲಿಗಾರ ಸೇರಿದಂತೆ ಇತರ ದಾನಿಗಳನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.