ADVERTISEMENT

ಕುಷ್ಟಗಿ | ಅನಧಿಕೃತ ಕೋಚಿಂಗ್‌ ಕೇಂದ್ರಗಳ ಹಾವಳಿ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 3:11 IST
Last Updated 17 ಜೂನ್ 2024, 3:11 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಕುಷ್ಟಗಿ: ತಾಲ್ಲೂಕಿನಲ್ಲಿ ನಾಯಿಕೊಡೆಗಳಂತೆ ನಿಯಮಬಾಹಿರವಾಗಿ ಬೆಳೆಯುತ್ತಿರುವ ಅನಧಿಕೃತ ಕೋಚಿಂಗ್ ಕೇಂದ್ರಗಳು ಹಾಗೂ ಮನೆ ಪಾಠದ ಹಾವಳಿ ನಿಯಂತ್ರಿಸುವಂತೆ ಶಾಲಾ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಲಾಗಿದೆ.

ಈ ಕುರಿತು ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲ್ಲೂಕು ಘಟಕದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದೆ. ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ತಾಲ್ಲೂಕಿನಲ್ಲಿ ಅನಧಿಕೃತ ಕೋಚಿಂಗ್ ಕೇಂದ್ರಗಳು ರಾಜಾರೋಷವಾಗಿ ನಡೆಯುತ್ತಿವೆ. ಯಾವುದೇ ಸೌಲಭ್ಯಗಳ ಇಲ್ಲದಿದ್ದರೂ ಕೇಂದ್ರಗಳನ್ನು ನಡೆಸುವವರು ದಾಖಲಾಗುವ ಮಕ್ಕಳ ಪಾಲಕರಿಂದ ₹ 50ರಿಂದ60-ಸಾವಿರ ವಸೂಲಿ ಮಾಡುತ್ತಿದ್ದಾರೆ. ಇಂಥ ಕೇಂದ್ರಗಳ ಮೇಲೆ ಇಲಾಖೆಯಿಂದ ಯಾವುದೇ ಕ್ರಮ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ADVERTISEMENT

ಈ ಕುರಿತು 'ಪ್ರಜಾವಾಣಿ' ಬಳಿ ಮಾತನಾಡಿದ ಒಕ್ಕೂಟದ ಪ್ರಮುಖರು ‘ಪ್ರತಿವರ್ಷವೂ ಹೊಸ ನಿಯಮಗಳನ್ನು ಹೇರುವ ಇಲಾಖೆ ಅಕ್ರಮವಾಗಿ ನಡೆಯುತ್ತಿರುವ ಕೋಚಿಂಗ್ ಕೇಂದ್ರಗಳ ಮೇಲೆ ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಅಷ್ಟೇ ಅಲ್ಲದೆ ಅನೇಕ ಸರ್ಕಾರಿ ಶಾಲೆಗಳ ಶಿಕ್ಷಕರೇ ಬೇನಾಮಿ ಹೆಸರಿನಲ್ಲಿ ಇಂಥ ಕೇಂದ್ರಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬೇರೆ ಬೇರೆ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ ಮಕ್ಕಳೇ ಈ ಕೇಂದ್ರಗಳಲ್ಲಿ ಪ್ರವೇಶ ಪಡೆದಿದ್ದು ಸರ್ಕಾರಿ ಶಾಲೆಗಳ ಶಿಕ್ಷಕರು ಗೈರಾಗುವ ಮಕ್ಕಳಿಗೂ ಹಾಜರಾತಿ ನೀಡುವ ಮೂಲಕ ಶಿಕ್ಷಣ ಇಲಾಖೆಯನ್ನು ವಂಚಿಸುತ್ತಿದ್ದಾರೆ‘ ಎಂದು ದೂರಿದರು.

ಇಷ್ಟಾದರೂ ಶಿಕ್ಷಣ ಇಲಾಖೆ ವಿವಿಧ ಹಂತದ ಅಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿಲ್ಲ. ಈಗಲಾದರೂ ತಾಲ್ಲೂಕಿನಲ್ಲಿರುವ ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಒಕ್ಕೂಟದ ಮೂಲಕ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೆಸರು ಹೇಳಲು ಬಯಸದ ಒಕ್ಕೂಟದ ಪ್ರತಿನಿಧಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.