ಕನಕಗಿರಿ: ‘ಮಾನಸಿಕ ಹಾಗೂ ದೈಹಿಕ ಕಾಯಿಲೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ ಬಿಜ್ಜಳ ತಿಳಿಸಿದರು.
ಇಲ್ಲಿನ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘ, ದಿ.ಡಾ.ಎಸ್.ಜಿ.ಬಿಜ್ಜಳ ಸ್ಮಾರಕ ಪ್ರತಿಷ್ಠಾನ, ಚಿತ್ತ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಬೆಂಗಳೂರು, ಭಾರತೀಯ ಮನೋವೈದ್ಯಕೀಯ ಸಂಘ ಹಾಗೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಇಲ್ಲಿನ ಕಲ್ಮಠದಲ್ಲಿ ಮಂಗಳವಾರ ನಡೆದ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾದಕ ದ್ರವ್ಯ ಹಾಗೂ ಮದ್ಯ ಸೇವನೆ, ಗುಟ್ಕಾ, ಮಟ್ಕಾ ವ್ಯಸನಗಳಿಗೆ ಯುವಕರು ಅಂಟಿಕೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಇಂಥ ದುಶ್ಚಟಗಳಿಂದ ಪ್ರತಿಯೊಬ್ಬರು ದೂರವಿರಬೇಕು ಎಂದು ಅವರು ತಿಳಿಸಿದರು.
ಡಾ. ಚನ್ನಮಲ್ಲಸ್ವಾಮಿ ಮಾತನಾಡಿ,‘ಶೇ. 25ರಷ್ಟು ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಾನಸಿಕ ರೋಗಕ್ಕೆ ಚಿಕಿತ್ಸೆ ಇದ್ದು, ಒತ್ತಡದ ಜೀವನದಿಂದ ದೂರವಿರಬೇಕು’ ಎಂದು ತಿಳಿಸಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಆದಷ್ಟು ದೂರವಿರಬೇಕು. ಜಿಗುಪ್ಸೆಯಿಂದ ಬಳಲುತ್ತಿದ್ದರೆ ವೈದ್ಯರಿಂದ ಆಪ್ತ ಸಮಾಲೋಚನೆ ಮಾಡಬೇಕು ಎಂದು ಹೇಳಿದರು.
ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ರ, ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ವಾಗೀಶ ಹಿರೇಮಠ, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.