ADVERTISEMENT

ಮಣ್ಣಿನ ಕಳ್ಳ‌ ಜನಾರ್ದನ ರೆಡ್ಡಿ ರಾಜ್ಯದ ಜನರ ಕ್ಷಮೆಯಾಚಿಸಲಿ: ಸಚಿವ‌ ತಂಗಡಗಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 7:44 IST
Last Updated 19 ಜೂನ್ 2024, 7:44 IST
<div class="paragraphs"><p>ಸಚಿವ‌ ತಂಗಡಗಿ</p></div>

ಸಚಿವ‌ ತಂಗಡಗಿ

   

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಜನಾರ್ದನ ರೆಡ್ಡಿ ಮಣ್ಣಿನ‌ ಕಳ್ಳ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಶೋಕ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು ಬಿಜೆಪಿ ಸರ್ಕಾರ‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ತೈಲ ಬೆಲೆಯನ್ನು ನೂರು ರೂಪಾಯಿ ದಾಟಿಸಿದರು. ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರ ಓಲೈಕೆಗೆ ಅಬ್ಬರಿಸುತ್ತಿದ್ದಾರೆ. ರೆಡ್ಡಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿನ‌ ದೂಳು ಅಲ್ಲ, ಅವರ ಕಾಲಿನ ಉಗುರಿನಲ್ಲಿನ ದೂಳಿಗೂ ಸಮ ಇಲ್ಲ. ರೆಡ್ಡಿ ಅವರೇ ಇದು ಬಳ್ಳಾರಿಯಲ್ಲ, ಕೊಪ್ಪಳ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಸುಳ್ಳು ಆಶ್ವಾಸನೆ ಕೊಟ್ಟು ಶಾಸಕರಾಗಿ ಆಯ್ಕೆಯಾಗಿರುವ ಬಗ್ಗೆ ಜನತೆಗೆ ಗೊತ್ತಾಗಿದೆ. ಪರಿಣಾಮ ಗಂಗಾವತಿಯಲ್ಲಿ ಜನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 16,000 ಮತಗಳ ಮುನ್ನಡೆ ನೀಡಿದ್ದಾರೆ. ಮುಂದಿ‌ನ ದಿನಗಳಲ್ಲಿ‌ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.

ADVERTISEMENT

ರೆಡ್ಡಿ ಅವರು ನಮ್ಮ ಬಳಿ ಅನುದಾನಕ್ಕಾಗಿ ಅಲೆದಾಡಿದರು. ಅನುಕೂಲ ಪಡೆದು ನಮ್ಮ ನಾಯಕರ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಕೂಡಲೇ ರೆಡ್ಡಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೆಡ್ಡಿ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಜನ ಕಾಂಗ್ರೆಸ್ ಪಕ್ಷದ ಪರ ತೀರ್ಪು ನೀಡುವ ಮೂಲಕ ರೆಡ್ಡಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ದೇಶ ಮೆಚ್ಚಿದ ನಾಯಕ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಇಂತಹ ನಾಯಕನ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ನಮಗೂ ಮಾತನಾಡಲು ಬರಲಿದೆ, ಆದರೆ ಆ ರೀತಿ ಮಾತನಾಡುವ ಸಂಸ್ಕಾರವನ್ನು ನಮ್ಮ ಗುರು- ಹಿರಿಯರು ಕಲಿಸಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ. ಇಲ್ಲದಿದ್ದಲ್ಲಿ ಭಾರಿ ಬೆಲೆ ತೆತ್ತಬೇಕಾದಿತ್ತು ಎಂದು ಸಚಿವರು ಎಚ್ಚರಿಸಿದರು.

ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್, ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಪಾಲ್ಗೊಂಡಿದ್ದರು.

ರೆಡ್ಡಿ ಪ್ರತಿಕೃತಿ ದಹಿಸಿ ಆಕ್ರೋಶ

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವಹೇಳನಕಾರಿಯಾಗಿ ಮಾತಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿ ಅಶೋಕ ವೃತ್ತದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು ರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರೆಡ್ಡಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಕೃತಿ ದಹಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಗರದಲ್ಲಿ ‌ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಜನಾರ್ದನ ರೆಡ್ಡಿ ಸಾಮಾನ್ಯ ಜನರ ಬದುಕು ದಯನೀಯ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್‌ ಎಂದು ಟೀಕಿಸಿದ್ದರು.

ರಾಜ್ಯ ಸರ್ಕಾರ ಗ್ಯಾರಂಟಿಗಳ ನೆಪದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಇನ್ನೊಂದು ಕಡೆ ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ.

ಈ ಮೂಲಕ ಇದೊಂದು ಪಿಕ್‌ ಪಾಕೆಟ್‌ ಸರ್ಕಾರ ಎಂದು ಹರಿಹಾಯ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.