ಕುಷ್ಟಗಿ: ಮುಸ್ಲಿಂ ಸಮುದಾಯಗಳೇ ಇಲ್ಲದ ತಾಲ್ಲೂಕಿನ ಕುರುಬನಾಳ, ನಾಗರಾಳ ಇನ್ನೂ ಕೆಲ ಗ್ರಾಮಗಳಲ್ಲಿನ ಇತರೆ ಸಮುದಾಯದವರು ಅಲಾಯಿ ದೇವರುಗಳನ್ನು ಪ್ರತಿಷ್ಠಾಪಿಸಿ ಮೊಹರಂ ಆಚರಣೆಯಲ್ಲಿ ಶ್ರದ್ಧೆ, ಭಕ್ತಿಯೊಂದಿಗೆ ತೊಡಗಿರುವುದು ಕಂಡುಬಂದಿದೆ.
ಗ್ರಾಮದಲ್ಲಿ ಮಸೀದಿ ನಿರ್ಮಿಸಲಾಗಿದ್ದು ಅದರಲ್ಲಿ ಪಂಜಾಗಳನ್ನು ಕೂಡ್ರಿಸುವುದು ಸೇರಿದಂತೆ ಮೊಹರಂ ಸಂದರ್ಭದಲ್ಲಿ ಅನುಸರಿಸಬೇಕಾದ ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಪಕ್ಕದ ಕಂದಕೂರು ಗ್ರಾಮದ ದೋಟಿಹಾಳ ಎಂಬ ಕುಟುಂಬದವರು ನೆರವೇರಿಸುತ್ತ ಬಂದಿದ್ದಾರೆ.
ಗ್ರಾಮ ಚಿಕ್ಕದಾದರೂ ಇಲ್ಲಿಯ ಜನರ ಮನಸ್ಸು ಮಾತ್ರ ದೊಡ್ಡದು. ಹನುಮಂತ ದೇವರು, ಬಸವಣ್ಣ, ಶರಣಬಸವ, ತಾಯಮ್ಮದೇವಿ ಹೀಗೆ ಇತರೆ ಹಬ್ಬ, ಜಾತ್ರೆಗಳನ್ನು ತಾರತಮ್ಯಭೇದವಿಲ್ಲದೆ ಆಚರಿಸುತ್ತ ಬಂದಿದ್ದಾರೆ. ಗ್ರಾಮದಲ್ಲಿನ ಮೊಹರಂ ಆಚರಣೆ ಕನಿಷ್ಟ ನೂರು ವರ್ಷದ ಹಿಂದಿನಿಂದಲೂ ನಡೆದುಬಂದಿದೆ. ಆ ಸಂಪ್ರದಾಯ ಈಗಲೂ ಮುಂದುವರೆದಿದೆ.
ಎಲ್ಲ ಊರುಗಳಲ್ಲಿಯೂ ಜನರು ಮೊಹರಂದಲ್ಲಿ ಭಾಗಿಯಾಗಿರುತ್ತಿದ್ದರೆ ನಮ್ಮ ಊರಿನ ಜನರೂ ಅಂಥ ಆಚರಣೆಯಿಂದ ವಂಚಿತರಾಗಬಾರದು ಎಂದೆ ಇಡಿ ಊರಿನ ಜನರು ಸೇರಿ ಮೊಹರಂ ಅನ್ನು ಭಕ್ತಿಯೊಂದಿಗೆ ಆಚರಿಸುತ್ತಿದ್ದೇವೆ. ತಾತ, ಮುತ್ತಾನ ಕಾಲದಿಂದಲೂ ಬಂದಿರುವ ಸಂಪ್ರದಾಯ ಇಲ್ಲಿ ನಡೆಯುತ್ತಿದೆ. ದೇವರು ಒಬ್ಬನೇ, ಎಲ್ಲ ಜಾತಿ, ಧರ್ಮಗಳ ಸಾಧು ಸಂತರು, ಸತ್ಪುರುಷರು, ಶರಣರ ತತ್ವ, ಸಂದೇಶಗಳು ಮನುಕುಲದ ಉದ್ಧಾರಕ್ಕಾಗಿಯೇ ಇವೆ. ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ. ಹಾಗಾಗಿ ಜಾತಿ ಮರೆತು ಮೊಹರಂ ಸೇರಿದಂತೆ ಎಲ್ಲ ಹಬ್ಬಗಳನ್ನೂಶ್ರದ್ಧಾ ಭಕ್ತಿಯೊಂದಿಗೆ ಆಚರಿಸುತ್ತಿದ್ದೇವೆ. ಈ ಪರಂಪರೆ ಭವಿಷ್ಯದ ಪೀಳಿಗೆಗೂ ಮಾದರಿಯಾಗಬೇಕೆಂಬುದು ನಮ್ಮ ಆಶಯ ಎಂದೆ ತಮ್ಮ ಗ್ರಾಮದ ಭಾವೈಕ್ಯದ ಬದುಕಿನ ರೀತಿ ಕುರಿತು ಹಿರಿಯರಾದ ಕನಕಪ್ಪ ವಾಲ್ಮೀಕಿ, ಪವಾಡೆಪ್ಪ, ಬಾಲಪ್ಪ, ನಿಜಲಿಂಗಪ್ಪ, ಉಳಿಯಪ್ಪ ಹಡಪದ ಇತರರು ಸಂತಸ ಹಂಚಿಕೊಂಡರು.
ಹಳೆಯದಾಗಿದ್ದ ಮಸೀದಿಯ ಜೀರ್ಣೋದ್ಧಾರ ನಡೆಯುತ್ತಿದ್ದು ಅದರ ಖರ್ಚು ವೆಚ್ಚಗಳನ್ನೆಲ್ಲ ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಮೊಹರಂ ಸಂದರ್ಭದಲ್ಲಿನ ಖರ್ಚುಗಳಿಗೆ ಊರಿನ ಜನರು ಯೋಗ್ಯತೆ ಅನುಸಾರ ದೇಣಿಗೆ ನೀಡುತ್ತಿರುವುದರ ಕುರಿತು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಿರುವ ರಾಜಾಸಾಬ್ ದೋಟಿಹಾಳ ವಿವರಿಸಿದರು. ಮುಸ್ಲಿಮರು ಇಲ್ಲದ ಕಾರಣ ನಮ್ಮ ಪೂರ್ವಜರ ಕಾಲದಿಂದಲೂ ಈ ಊರಿನಲ್ಲಿ ಮೊಹರಂ ಆಚರಣೆಗೆ ನಮ್ಮ ಕುಟುಂಬ ಸಹಕರಿಸುತ್ತ ಬಂದಿದೆ ಎಂದೂ ಹೇಳಿದರು.
ಬಲಿದಾನದ 'ಖತಲ್‌ರಾತ್' ದಿನದಂದು ಹಿಂದೂಗಳ ಪ್ರತಿ ಮನೆಯವರೂ ಮಸೀದಿಗೆ ಭೇಟಿ ನೀಡಿ ಅಲಾಯಿ ದೇವರಿಗೆ ಪುಷ್ಪಮಾಲೆ, ಸಕ್ಕರೆ ಸಮರ್ಪಿಸಿ ಭಕ್ತಿ ಮೆರೆಯುತ್ತಾರೆ. ಅನೇಕ ಜನರು ಅಲಾಯಿ ದೇವರಿಗೆ ಹೊತ್ತಿರುವ ಹರಕೆಯನ್ನೂ ತೀರಿಸುವ ವಾಡಿಕೆ ಇದೆ. ಊರಿನ ತುಂಬ ಡೋಲಿಯೊಂದಿಗೆ ದೇವರುಗಳ ಮೆರವಣಿಗೆ ನಡೆಯುತ್ತದೆ. ಮೊಹರಂ ಕೊನೆಯ ದಿನ ದೇವರನ್ನು ಹೊಳೆಗೆ ಕರೆದೊಯ್ಯುವ ಸಂಪ್ರದಾಯದಲ್ಲಿ ಊರಿನ ಎಲ್ಲ ಜನರೂ ಭಾಗಿಯಾಗುವುದು ಇಲ್ಲಿಯ ವಿಶೇಷ.
ಅದೇ ರೀತಿ ನಾಗರಾಳ ಗ್ರಾಮದಲ್ಲಿಯೂ ಮುಸ್ಲಿಂ ಕುಟುಂಬ ಇಲ್ಲ ಆದರೂ ಅಲ್ಲಿ ಮೊಹರಂ ಭರ್ಜರಿಯಾಗಿ ನೆರವೇರುತ್ತಿದ್ದು ಗ್ರಾಮಸ್ಥರು ಅದನ್ನು ಊರಿನ ಎಲ್ಲರ ಹಬ್ಬ ಎಂದೆ ಆಚರಿಸುತ್ತಿದ್ದಾರೆ. ಖರ್ಚುಗಳಿಗೂ ಯಾರ ಬಳಿಯೂ ಕೈಯೊಡ್ಡುವುದಿಲ್ಲ ಎಂದು ಗ್ರಾಮಸ್ಥ ಹನುಮಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.