ಕುಷ್ಟಗಿ: ಒಣ ಮತ್ತು ಹಸಿ ಬರಕ್ಕೆ ಮತ್ತೊಂದು ಹೆಸರೇ ಕೊಪ್ಪಳ ಜಿಲ್ಲೆ. ಮಳೆ ಬೆಳೆ ವಿಚಾರದಲ್ಲಿ ಅಷ್ಟೊಂದು ಅವಿನಾಭಾವ ಸಂಬಂಧ. ಹಸಿಬರವಾದರೆ ಒಂದಷ್ಟು ಅಂತರ್ಜಲ ಹೆಚ್ಚಬಹುದು, ದನಕರುಗಳಿಗೆ ಮೇವೂ ದೊರೆಯಬಹುದು. ಆದ್ರ ಒಣ ಬರದ ಸಂಕಷ್ಟ ಮಾತ್ರ ಯಾರಿಗೂ ಬೇಡ ನೋಡ್ರಿ. ಹೌದು ಕಳೆದ ವರ್ಷ ವರುಣನ ಅವಕೃಪೆಯಿಂದೊದಗಿದ ಒಣ ಬರವನ್ನು ನೆನಪಿಸಿಕೊಂಡ ರೈತರಲ್ಲಿ ಈ ಆತಂಕದ ಮಾತುಗಳು ಬರುವುದು ಸಹಜ.
ಹಿಂದಿನ ವರ್ಷದ ಮುಂಗಾರು ಹಾಗೂ ಹಿಂಗಾರು ಕಳೆದು ಅನೇಕ ತಿಂಗಳುಗಳ ನಂತರ ತಡವಾಗಿಯಾದರೂ ಮಳೆಯ ಲಕ್ಷಣಗಳು ಗೋಚರಿಸುತ್ತಿವೆ. ಲೋಕಸಭಾ ಚುನಾವಣೆ, ಮತದಾನ ಹಬ್ಬ ಮುಗಿದಿದ್ದು ಫಲಿತಾಂಶಕ್ಕೆ ತಲೆಕೆಡಿಸಿಕೊಳ್ಳದ ರೈತರು ಈಗ ಮುಂಗಾರಿನ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹೆಚ್ಚುಕಡಿಮೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕೃತಿಕಾ ಮಳೆಯ ಶುಭಾಗಮನವಾಗಿದ್ದು ಈ ಬಾರಿ ಉತ್ತಮ ಮಳೆ ಬೆಳೆ ಬರಬಹುದೆಂಬ ಭರವಸೆಯ ನಿರೀಕ್ಷೆ ಹೊತ್ತ ರೈತರು ಹೊಲಗದ್ದೆಗಳತ್ತ ಮುಖ ಮಾಡಿದ್ದಾರೆ.
ಇದೇ ರೀತಿ ವರುಣ ಕೃಪೆ ತೋರುತ್ತ ಮುಂದುವರಿದರೆ ಕೃಷಿ ಚಟುವಟಿಕೆಗಳು ಗರಿಗೆದರುವ ಲಕ್ಷಣಗಳಿವೆ. ಮುಂಗಾರು ಆಗಮನದ ಸುಳಿವು ದೊರೆಯುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸದ ಗೆರೆಗಳು ಗೋಚರಿಸುತ್ತಿವೆ.
ಮಳೆ ಭರವಸೆಯ ನಡುವೆಯೂ ಮಳೆಗಾಲದ ಬಗ್ಗೆ ರೈತರಲ್ಲಿ ಬಹಳಷ್ಟು ಅನುಮಾನಗಳೂ ಇವೆ. ಕಳೆದ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಿ ದಾಖಲೆ ಪ್ರಮಾಣದಲ್ಲಿ ಬಿತ್ತನೆಯೂ ಆಗಿತ್ತು. ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಎಳ್ಳು, ಶೇಂಗಾ ಮೊದಲಾದ ಬೆಳೆಗಳ ಬೀಜಗಳನ್ನು ಹೊಲದೊಡಲಿಗೆ ಹಾಕಿದ್ದೂ ಆಯಿತು. ಆದರೆ ಬೆಳೆಗಳು ಸಮೃದ್ಧವಾಗಿ ಬೆಳೆಗೆ ಹೊಂದುವಷ್ಟರಲ್ಲಿ ಮಳೆ ಸುಳಿವಿಲ್ಲದಂತಾಗಿ ಬೆಳೆದು ನಿಂತ ಬೆಳೆಗಳೆಲ್ಲ ಒಣಗಿ ಕರಕಲಾದವು. ಅಷ್ಟೇ ಅಲ್ಲ ಒಣ ಬರಕ್ಕೆ ತುತ್ತಾಗಿ ಜಾನುವಾರುಗಳಿಗೆ ಹೊಟ್ಟು ಮೇವು ಸಹ ಅಲಭ್ಯವಾಗಿ ಬಹುತೇಕ ರೈತರು ಎತ್ತು, ಹಸುಗಳನ್ನು ಕಸಾಯಿಖಾನೆಯವರಿಗೆ ಒಪ್ಪಿಸಿ ಉದ್ಯೋಗಕ್ಕಾಗಿ ಅಲೆಯುತ್ತ ಗುಳೆ ಹೋಗಿದ್ದು ಬರದ ಭೀಕರತೆಯನ್ನು ಸಾರಿದ ಚಿತ್ರಣ ಇನ್ನೂ ಕಣ್ಮುಂದಿದೆ. ಆದರೆ, ಈ ಬಾರಿ ಭೂತಾಯಿ ಹಾಗೆ ಮಾಡಲಿಕ್ಕಿಲ್ಲ ಎಂದೇ ರೈತರು ವಸುಂಧರೆಯ ಮೇಲೆ ನಂಬಿಕೆ ಇರಿಸಿ ಕೂರಿಗೆಯ ಮೇಲಿನ ದೂಳುಕೊಡವಿ ಬಿತ್ತನೆಗೆ ಸಜ್ಜುಗೊಳಿಸಲು ಮುಂದಾಗಿದ್ದಾರೆ.
ನೆರೆಬೆಂಚಿಯ ರೈತ ಚಂದಪ್ಪ ಗುರಿಕಾರ ಮೊದಲ ಮಳೆಗೇ ಸಜ್ಜೆ ಬಿತ್ತನೆಯಲ್ಲಿ ತೊಡಗಿ ಭವಿಷ್ಯದೆಡೆಗೆ ಗುರಿ ಇಟ್ಟಿದ್ದು ಕಂಡುಬಂದಿತು. ಹಿಂದಿನ ಈ ವರ್ಷದ ಮಳೆ ಬೆಳೆ ಕುರಿತು ಅವರನ್ನು ಮಾತಿಗೆಳೆದಾಗ ‘ನಮ್ಮ ಕೈಯಾಗ ಏನೈತ್ರಿ? ಎಲ್ಲಾ ಮಳಿಯಪ್ಪಂದು, ಮಳಿಯಾದ್ರ ಚೊಲೊ, ಇಲ್ಲಾಂದ್ರ ಏನ್ ಮಾಡೂದೈತ್ರಿ? ದನ ಕರ ಕೊಟ್ಟು ಕೆಲಸ ಸಿಕ್ಕಲ್ಲೆ ದುಡ್ಯೇಕ ದೇಶಾವರಿ ಮ್ಯಾಲೆ ಹೋಗೊದು ನಮ್ಮ ಹಣೆಬರದಾಗ ಐತೇಐತಿ ಹೌದಲ್ರಿ’ ಎಂದೇ ವಿಷಾದ ಹೊರಹಾಕಿದರು. ಚಳಗೇರಿಯ ವೀರಭದ್ರಪ್ಪ, ತೋಪಲಕಟ್ಟಿಯ ಹನುಮಗೌಡ ಹೀಗೇ ಬಹುತೇಕ ರೈತರಲ್ಲಿ ಇಂಥದ್ದೇ ಮಾತುಗಳು ಬಂದವು. ಆದರೆ ಅವರಿಂದ ಮರುಕ್ಷಣದಲ್ಲೇ ‘ಈ ಬ್ಯಾರೆ ಮಳಿ ಬೆಳಿ ಚೊಲೊ ಅದಾವಂತ ಎಲ್ಲಾ ಕಡೆನೂ ಕಾರಣೀಕದಾಗ ಹೇಳ್ಯಾರ ನೋಡ್ರಿ’ ಎಂಬ ಆಶಾಭಾವನೆ ಅವರಲ್ಲಿನ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿತು.
ಪೂರ್ವ ಸಿದ್ಧತೆ: ಈ ಮಧ್ಯೆ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ಹೊಲಗದ್ದೆಗಳನ್ನು ಹದಗೊಳಿಸುತ್ತಿರುವ ದೃಶ್ಯ ವಿವಿಧ ಕಡೆ ಭೇಟಿ ನೀಡಿದಾಗ ಕಂಡುಬಂದಿತು. ಮಳೆಯಾಗುತ್ತಿದ್ದಂತೆ ಟ್ರ್ಯಾಕ್ಟರ್‌ಗಳ ಭರಾಟೆ ಜೋರಾಗಿದೆ. ಅವುಗಳಿಗೀಗ ಬಿಡುವಿಲ್ಲದ ಕೆಲಸ. ಮಡಿಕೆ, ಕುಂಟಿ ಹೊಡೆದು ಬಿತ್ತನೆಗೆ ಸಜ್ಜುಗೊಳಿಸುವ ಚಿತ್ರಣ ಕಾಣುತ್ತಿದೆ. ಮಳೆಯಾಗಿ ಭೂಮಿಯಲ್ಲಿ ತೇವಾಂಶ ಉಳಿದರೆ ಬಿತ್ತನೆ ಚಟುವಟಿಕೆಗೆ ಚಾಲನೆ ದೊರೆಯಲಿದೆ.ಮಳೆ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಪ್ರತಿ ವರ್ಷ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಮುಂದೆ ಒಳ್ಳೆಯದಾಗಬಹುದೆಂಬ ಆಶಾಭಾವದೊಂದಿಗೆ ಮುನ್ನಡೆಯಬೇಕಿದೆ. ಶರಣಪ್ಪ ಹೊಸೂರು ರೈತ
ಮಳಿ ಆದಾಗ ಹದ ನೋಡಿ ಬಿತ್ತೀದ್ರ ಒಂದಷ್ಟು ಬೆಳಿ ಕೈಗೆ ಹತ್ತಬಹುದು. ಎಲ್ಲಾ ಶಿವನ ಇಚ್ಛೆ ನೋಡ್ರಿ. ಮಳೆ ಆಗ್ತಾ ಇರೋದಂತೂ ಖುಷಿ ನೀಡ್ಯಾದ್ರಿ.ಚಂದಪ್ಪ ಗುರಿಕಾರ ರೈತ
ಮಳೆ ಬೆಳೆಗೆ ಸಂಬಂಧಿಸಿದಂತೆ ರೈತರಿಗೆ ಪ್ರತಿ ವರ್ಷ ಏನಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಮುಂದೆ ಒಳ್ಳೆಯದಾಗಬಹುದೆಂಬ ಆಶಾಭಾವದೊಂದಿಗೆ ಮುನ್ನಡೆಯಬೇಕಿದೆ.ಶರಣಪ್ಪ ಹೊಸೂರು ರೈತ
ಜಿಲ್ಲೆಯಲ್ಲಿ ಮೇಲಿಂದ ಮೇಲೆ ಉತ್ತಮವಾಗಿ ಮಳೆಯಾಗುತ್ತಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಂಗ್ರಹವೂ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ರೈತರು ಬಿತ್ತನೆ ಮಾಡಬೇಕು. ಅವರಿಗೆ ಯಾವುದೇ ಕೊರತೆಯಾಗುವುದಿಲ್ಲ.ರುದ್ರೇಶಪ್ಪ ಟಿ.ಎಸ್. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.