ADVERTISEMENT

ಕೊಪ್ಪಳ | ಸೌಲಭ್ಯಕ್ಕಾಗಿ ಬೇಕು ಇನ್ನಷ್ಟು ಹೋರಾಟ; ಎಚ್‌.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 5:36 IST
Last Updated 27 ಸೆಪ್ಟೆಂಬರ್ 2023, 5:36 IST
ಕೊಪ್ಪಳದಲ್ಲಿ ಮಂಗಳವಾರ ನಡೆದ 'ಕೊಪ್ಪಳ ಜಿಲ್ಲಾ ಪ್ರಗತಿಪಥ ಅವಲೋಕನ ವಿಚಾರ ಸಂಕಿರಣ'ವನ್ನು ಸಾಹಿತಿ ಎಚ್‌.ಎಸ್‌. ಪಾಟೀಲ ಅವರು ಉದ್ಘಾಟಿಸಿದರು
ಕೊಪ್ಪಳದಲ್ಲಿ ಮಂಗಳವಾರ ನಡೆದ 'ಕೊಪ್ಪಳ ಜಿಲ್ಲಾ ಪ್ರಗತಿಪಥ ಅವಲೋಕನ ವಿಚಾರ ಸಂಕಿರಣ'ವನ್ನು ಸಾಹಿತಿ ಎಚ್‌.ಎಸ್‌. ಪಾಟೀಲ ಅವರು ಉದ್ಘಾಟಿಸಿದರು   

ಕೊಪ್ಪಳ: ‘ಅನೇಕ ಹೋರಾಟಗಳ ಮೂಲಕವೇ ಪ್ರತ್ಯೇಕ ಜಿಲ್ಲೆಯನ್ನು ಪಡೆದುಕೊಂಡಿದ್ದೇವೆ. ಹಿಂದಿನ ಎರಡೂವರೆ ದಶಕಗಳ ಅವಧಿಯಲ್ಲಿ ಅನೇಕ ಸವಲತ್ತುಗಳು ಬಂದಿವೆಯಾದರೂ, ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಅವುಗಳಿಗೆ ಹೋರಾಟ ಮಾಡಬೇಕಾಗಿದೆ’ ಎಂದು ಸಾಹಿತಿ ಎಚ್.ಎಸ್.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ 'ಕೊಪ್ಪಳ ಜಿಲ್ಲಾ ಪ್ರಗತಿಪಥ ಅವಲೋಕನ ವಿಚಾರ ಸಂಕಿರಣ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಸಾಹಿತಿಗಳು, ವ್ಯಾಪಾರಿಗಳು, ವರ್ತಕರು, ಅನೇಕ ನಾಗರಿಕರ ಹೋರಾಟದ ಫಲದಿಂದಾಗಿ ನಮ್ಮ ಜಿಲ್ಲೆ ರಚನೆಯಾಗಿದೆ. ಇದಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ಸ್ಮರಿಸಬೇಕು’ ಎಂದರು.

‘1950ರ ದಶಕದಲ್ಲಿ ಪಿಯುಸಿ ವ್ಯಾಸಂಗಕ್ಕಾಗಿ ಧಾರವಾಡ, ಹೈದರಾಬಾದ್‌, ಕಲಬುರಗಿಗೆ ಹೋಗಬೇಕಾದ ಅನಿವಾರ್ಯತೆಯಿತ್ತು. ಈಗ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಸಿಗುತ್ತಿದೆ. ಅನೇಕ ಕಾರಣಗಳಿಂದಾಗಿ ವಿವಿಧ ಕಾರಣಗಳಿಂದ ಆಗಿನ ಹೈದರಾಬಾದ್‌ ಕರ್ನಾಟಕಕ್ಕೆ ಮೀಸಲಾತಿ ನೀಡಬೇಕು ಎನ್ನುವ ಹೋರಾಟ ಆರಂಭವಾಯಿತು. ಸಂವಿಧಾನಿಕವಾಗಿ ಈಗಿನ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲಿಗೆ 371 ಜೆ ಕಲಂ ಜಾರಿಯಾಯಿತು’ ಎಂದು ನೆನಪಿಸಿಕೊಂಡರು.

ADVERTISEMENT

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ‘ಜಿಲ್ಲೆಯಲ್ಲಿರುವ ಧಾರ್ಮಿಕ, ಪ್ರವಾಸಿ ತಾಣಗಳು ತಮ್ಮದೆ ಇತಿಹಾಸದಿಂದ ಶ್ರೀಮಂತವಾಗಿವೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಿದ್ದರೆ ಜಿಲ್ಲೆಯ ಬೆಳವಣಿಗೆ ವೇಗ ಹೆಚ್ಚಾಗುತ್ತಿತ್ತು. ಜಿಲ್ಲಾ ಕೇಂದ್ರದಲ್ಲಿಯೇ ಇರಬೇಕಾದ ಕೊಪ್ಪಳ ವಿಶ್ವವಿದ್ಯಾಲಯ ಕುಕನೂರು ತಾಲ್ಲೂಕಿಗೆ ಹೋಗಿದೆ. ಯುವಕರು ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕಾಗಿದೆ’ ಎಂದರು.

ಕೊಪ್ಪಳ ವಿ.ವಿ.ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ ‘ಬಸವಣ್ಣನವರು ನಡೆದಾಡಿದ ಕೊಪ್ಪಳದಲ್ಲಿ ಹೊಸ ವಿಶ್ವವಿದ್ಯಾಲಯ ಆರಂಭವಾಗಿದ್ದು, ಪ್ರತಿಯೊಬ್ಬರಿಗೂ ಇದರ ಪ್ರಯೋಜನ ಲಭಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಜನರ ಕಣ್ಣೀರು ಒರೆಸುವ ಕೆಲಸ ನಾವು ಮಾಡುತ್ತೇವೆ. ಬಲಿಷ್ಠ ಸಮಾಜವನ್ನು ನಿರ್ಮಾಣ ಮಾಡುವ, ಬಸಣವಣ್ಣನವರ ಆಸೆಯಾಗಿದ್ದ ಸಮಸಮಾಜದ ಪರಿಕಲ್ಪನೆಯನ್ನು ನಮ್ಮ ವಿ.ವಿ. ಈಡೇರಿಸುತ್ತದೆ’ ಎಂದರು.     

ಸಾಹಿತಿ ಸಾವಿತ್ರಿ ಮುಜುಮದಾರ ಅವರು ಶಿಕ್ಷಣ, ಕಲೆ, ಸಾಹಿತ್ಯಿಕ ಪರಂಪರೆ ಕುರಿತು ಹಾಗೂ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳೆಯಲಿ ಆರ್ಥಿಕ ಸ್ಥಿತಿಗತಿ ಕುರಿತು ವಿಚಾರ ಮಂಡಿಸಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಚ್.ಡಿ ಪಾಟೀಲ್, ಕೊಪ್ಪಳ ವಿ.ವಿ. ಕುಲಸಚಿವ ಪ್ರೊ.ಕೆ.ವಿ.ಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಪಿಒ ಮಂಜುನಾಥ, ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಮನೋಜ ಡೊಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಕೊಪಣನಾಡು ಬೌದ್ಧ ಕೇಂದ್ರವಾಗಿದ್ದಾಗ ಇಲ್ಲಿ ವಿಶ್ವವಿದ್ಯಾಲಯವಿತ್ತು. ಜೈನ ಕಾಶಿ ಎಂತಲೂ ಹೆಸರು ಪಡೆದಿದೆ. ಜೈನ ಬೌದ್ಧ ಧರ್ಮಕ್ಕೆ ಹೆಸರಾಗಿದ್ದ ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಠ ಪ್ರಕಾಶಮಾನವಾಗಿ ತನ್ನ ಬೆಳಕು ಹರಡುತ್ತಿದೆ.
ಎಚ್‌.ಎಸ್. ಪಾಟೀಲ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.