ಕೊಪ್ಪಳ: ’ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಚಲಿತರಾಗಬೇಕಿಲ್ಲ. ಇದರಲ್ಲಿ ಅವರಿಗೆ ಶಿಕ್ಷೆಯಾಗುವ ಪ್ರಶ್ನೆಯೇ ಇಲ್ಲ’ ಎಂದು ಸಿ.ಎಂ. ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲ್ಲೂಕಿನ ಬಸಾಪುರದಲ್ಲಿರುವ ಖಾಸಗಿ ಏರ್‌ಸ್ಟ್ರಿಪ್ಟ್‌ನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮುಡಾ ಹಗರಣದಲ್ಲಿ ವಿನಾಕಾರಣ ಮುಖ್ಯಮಂತ್ರಿಯವರ ಹೆಸರು ತರಲಾಗಿದೆ. ಇದು ರಾಜಕೀಯ ಆಟವಾಗಿದ್ದು ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ. ನ್ಯಾಯಾಲಯ ಪ್ರಾಥಮಿಕ ತನಿಖೆಗೆ ಮಾತ್ರ ಅನುಮತಿ ಕೊಟ್ಟಿದೆ. ನನ್ನ ಪ್ರಕಾರ ಸಿ.ಎಂ. ರಾಜೀನಾಮೆ ಕೊಡದೇ ಮುಂದಿನ ಮೂರೂವರೆ ವರ್ಷ ಮುಂದುವರಿಯಬೇಕು’ ಎಂದರು.
ನೀವೂ ಸಿ.ಎಂ. ಸ್ಥಾನದ ಆಕಾಂಕ್ಷಿಯಲ್ಲವೇ ಎನ್ನುವ ಪ್ರಶ್ನೆಗೆ ‘ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಎಂದು ನಾನು ಹೇಳಿದ್ದೇನೆ. ಒಂದು ವೇಳೆ ಕೊಟ್ಟರೆ ಲಿಂಗಾಯತ ಸಮುದಾಯದ ನಾಯಕನಾಗಿರುವ ನಾನೂ ಆಕಾಂಕ್ಷಿಯಾಗಿದ್ದೇನೆ. ಅವರಿಗೆ ಮುಖ್ಯಮಂತ್ರಿ ಹುದ್ದೆ ತೊರೆಯುವಂತೆ ಯಾರೂ ಹೇಳಿಲ್ಲ’ ಎಂದರು.
‘ಮುಡಾ ನಿವೇಶನಗಳನ್ನು ವಾಪಸ್ ಕೊಡುವುದು ಸಿದ್ದರಾಮಯ್ಯ ಅವರ ಪತ್ನಿಯ ತೀರ್ಮಾನ. ಪತಿಗೆ ಇದರಿಂದ ನೋವಾಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ. ಹಿಂದೆ ಆರ್. ಅಶೋಕ್ ಪ್ರಕರಣದಲ್ಲಿಯೂ ಇದೇ ರೀತಿ ಆಗಿತ್ತು. ಹಿಂದುಳಿದ ವರ್ಗಗಳ ಆಯೋಗದ ವರದಿ ಅಂಗೀಕಾರ ಬೇಗನೆ ಮಾಡಬೇಕು. ನಮ್ಮ ಚರ್ಮ ದಪ್ಪವಾಗಿದೆ. ಯಾವುದೇ ಜೇನುಹುಳು ಕಡಿದರೂ ಏನೂ ಆಗುವುದಿಲ್ಲ ಎಂದು ವರದಿ ಅಂಗೀಕಾರ ಪರಿಣಾಮದ ಬಗ್ಗೆ ಮಾರ್ಮಿಕವಾಗಿ ಹೇಳಿದರು.
ದಂಡು: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಜಿಲ್ಲೆಯಲ್ಲಿ ವಿಶ್ರಾಂತಿ ಪಡೆದು ಸಿಂಧನೂರಿಗೆ ತೆರಳಿದರು. ಈ ಮಾರ್ಗದುದ್ದಕ್ಕೂ ಅವರನ್ನು ನೋಡಲು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮುಗಿಬಿದ್ದಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕಾನೂನು ಸಚಿವ ಎಚ್.ಕೆ. ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕಿಶೋರಿ ಬೂದನೂರು ಇದ್ದರು.
ಸ್ವಾಗತ: ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಜಿಲ್ಲಾಡಳಿತ ಪರವಾಗಿ ಪುಸ್ತಕ ನೀಡಿ ಸ್ವಾಗತ ಕೋರಿದರು. ಪೊಲೀಸರು ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.