ADVERTISEMENT

ಕುಷ್ಟಗಿ | ಆಡಳಿತ ಮಂಡಳಿ ರಹಿತ ಪುರಸಭೆ, ಅಭಿವೃದ್ಧಿ ಕುಂಠಿತ

ಒಂದೂವರೆ ವರ್ಷದಿಂದ ಅಧ್ಯಕ್ಷರೇ ಇಲ್ಲ, ಸದಸ್ಯರ ಅವಧಿ 9 ತಿಂಗಳು ಮಾತ್ರ

ನಾರಾಯಣರಾವ ಕುಲಕರ್ಣಿ
Published 26 ನವೆಂಬರ್ 2024, 4:56 IST
Last Updated 26 ನವೆಂಬರ್ 2024, 4:56 IST
ಡಿ.ಎನ್‌. ಧರಣೇಂದ್ರಕುಮಾರ
ಡಿ.ಎನ್‌. ಧರಣೇಂದ್ರಕುಮಾರ   

ಕುಷ್ಟಗಿ: ಪಟ್ಟಣ ಅಷ್ಟೇನೂ ಸೌಂದರ್ಯದಿಂದ ಕೂಡಿಲ್ಲ. ನಮ್ಮೂರು ಹೀಗೇ ಇರಬೇಕು ಎನ್ನುವ ಪರಿಕಲ್ಪನೆಯುಳ್ಳ ಪ್ರತಿನಿಧಿಗಳ ಕೊರತೆ ಇದೆ. ಪುರಸಭೆಯಲ್ಲಿನ 22 ಸದಸ್ಯರ ಪೈಕಿ ಮೂರ್ನಾಲ್ಕು ಸದಸ್ಯರು ಸಿಬ್ಬಂದಿ, ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ಅವರಿಗೆ ಊರಿನ ಉಸಾಬರಿ ಬೇಕಿಲ್ಲ, ತಾವು ಉದ್ಧಾರವಾದರೆ ಸಾಕು ಎಂಬಂತಿದ್ದಾರೆ. ಪಟ್ಟಣದ ಯಾವ ಮೂಲೆಗೆ ಹೋದರೂ ಇಂಥ ಆಕ್ರೋಶದ ಮಾತುಗಳು ಕೇಳುವುದು ಸಾಮಾನ್ಯ.

ಸದಸ್ಯರ ಆಯ್ಕೆಗೆ ಚುನಾವಣೆ ಮುಗಿದು 6 ವರ್ಷಗಳು ಕಳೆದಿವೆ. ಮೊದಲ ಸಭೆ ನಡೆದು ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ನಾಲ್ಕು ವ‍ರ್ಷ ಪೂರೈಸಿದೆ. ಅಧ್ಯಕ್ಷ ಸ್ಥಾನ ತೆರವಾಗಿ ಒಂದೂವರೆ ವರ್ಷವಾದರೂ ಮೀಸಲಾತಿ ಪ್ರಕಟವಾಗದ ಕಾರಣ ಖಾಲಿ ಇತ್ತು. ನಂತರ ಮೀಸಲಾತಿ ಕುರಿತಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇನ್ನೂ 9 ತಿಂಗಳು ಕಳೆದರೆ ಈಗಿನ ಸದಸ್ಯರ ಅವಧಿಯೇ ಮುಗಿದು ಹೋಗುತ್ತದೆ. ಹಾಗಾಗಿ ಅಧ್ಯಕ್ಷರಿಲ್ಲದೆಯೇ ಈ ಅವಧಿ ಪೂರ್ಣಗೊಳ್ಳಲೂಬಹುದು ಎನ್ನಲಾಗುತ್ತಿದೆ.

ಯಾವುದೇ ಅಧಿಕಾರವಿಲ್ಲ, ಸಭೆಗಳಿಲ್ಲದ ಕಾರಣ ಸದಸ್ಯರು ಒಂದರ್ಥದಲ್ಲಿ ಇದ್ದೂ ಇಲ್ಲದಂತೆ. ಮುಖ್ಯಾಧಿಕಾರಿ ಮತ್ತು ಆಡಳಿತಾಧಿಕಾರಿ ಇದ್ದರೂ ಅವರಿಗೆ ಯಾವ ವಾರ್ಡಿನಲ್ಲಿ ಏನು ಸಮಸ್ಯೆ ಇದೆ, ಯಾವ ಕೆಲಸಗಳು ಆಗಬೇಕು, ಅಲ್ಲಿಯ ಜನರ ಬೇಕು ಬೇಡಿಕೆಗಳೇನು ಎಂಬುದು ಗೊತ್ತಿರುವುದಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದ ಕ್ರಿಯಾಯೋಜನೆಯನ್ನೂ ಅಧಿಕಾರಿಗಳೇ ಸಿದ್ಧಪಡಿಸುವುದರಿಂದ ಅವರಿಗೆ ಅಗತ್ಯ, ಅನಗತ್ಯ ಯಾವುದೆಂಬುದು ಗೊತ್ತಾಗುವುದಿಲ್ಲ. ಇದರಿಂದ ಅಭಿವೃದ್ಧಿ ವಿಷಯದಲ್ಲಿ ಅಸಮತೋಲನ ಉಂಟಾಗಿದೆ ಎಂಬ ಬೇಸರ ಕೆಲ ಸದಸ್ಯರದ್ದು.

ADVERTISEMENT

ಮೂಲಸೌಲಭ್ಯ ವಿಷಯಗಳಿಗೆ ಬಂದರೆ ಕೆಲವಡೆ ನೀರು ಪೋಲಾದರೆ ಇನ್ನೂ ಕೆಲವು ಕಡೆ ವಾರ ಕಳೆದರೂ ನೀರು ಬರುವುದಿಲ್ಲ ಎಂಬ ಆರೋಪವಿದೆ. ಮನೆ ಮನೆಯಲ್ಲಿನ ಕಸ ಸಂಗ್ರಹಿಸುತ್ತಿದೆಯಾದರೂ ಸಮರ್ಪಕ ವಿಲೇವಾರಿ ಇಲ್ಲ. ರಸ್ತೆ ಪಕ್ಕದಲ್ಲಿ ಸಾರ್ವಜನಿಕರಷ್ಟೇ ಅಲ್ಲ ಸ್ವತಃ ಪುರಸಭೆಯವರೇ ಟ್ರ್ಯಾಕ್ಟರ್‌ಗಳ ಮೂಲಕ ಕಸ ಹಾಕುತ್ತಿದ್ದು ಮುಖ್ಯರಸ್ತೆಗಳಲ್ಲಿ ಮಾಲಿನ್ಯ ಮಡುಗಟ್ಟಿದೆ.

ಕಟ್ಟಿಕೊಂಡ ಚರಂಡಿಗಳನ್ನು ಸ್ವಚ್ಛಗೊಳಿಸುವುದು ತಿಳಿದಾಗ ಮಾತ್ರ. ಬೀದಿದೀಪಗಳು ಬೆಳಗದಿದ್ದರೂ ಅವುಗಳ ನೆಪದಲ್ಲಿ ಲಕ್ಷಾಂತರ ಹಣ ಖರ್ಚಾಗುತ್ತದೆ. ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡಿದರೂ ಸಂತೆ ಮೈದಾನ ಅಧ್ವಾನಗೊಂಡಿದೆ. ಆಡಳಿತಾಧಿಕಾರಿ, ಯೋಜನಾ ನಿರ್ದೇಶಕರು ಇಲ್ಲಿಗೆ ಭೇಟಿ ನೀಡಿದ್ದೇ ಅಪರೂಪ ಎಂಬ ದೂರುಗಳು ಸಾಮಾನ್ಯ.

ಆಡಳಿತ ಮಂಡಳಿ ಇದ್ದರೇನೇ ಸಮಸ್ಯೆ

ಆಡಳಿತ ಮಂಡಳಿ ಇದ್ದರೇನೇ ಸಮಸ್ಯೆ ಹೆಚ್ಚು ಸಭೆ ನಡೆದರೂ ಅರ್ಥಪೂರ್ಣ ಚರ್ಚೆ ನಡೆಯುವುದಿಲ್ಲ ಕೆಲಸಕಾರ್ಯಗಳಿಗೆ ಪದೇಪದೇ ಅಡ್ಡಿಪಡಿಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಈಗ ನಮ್ಮ ಕೆಲಸ ಸರಿಯಾಗಿಯೇ ಮಾಡಿಕೊಂಡು ಹೋಗುತ್ತಿದ್ದೇವೆ ಎಂಬುದು ಪುರಸಭೆ ಕೆಲ ಸಿಬ್ಬಂದಿ ಅಂಬೋಣ. ಕಚೇರಿಯಲ್ಲಿ ಠಿಕಾಣಿ ಹೂಡುವ ಮಾಜಿ ಅಧ್ಯಕ್ಷರ ಇಬ್ಬರು ಸಹೋದರರು ಕಡತಗಳನ್ನು ಪರಿಶೀಲಿಸುತ್ತಿರುತ್ತಾರೆ. ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಮುಖ್ಯಾಧಿಕಾರಿ ಕಚೇರಿಯಲ್ಲಿ ಇರುವುದೇ ಅಪರೂಪ ಎಂಬ ಆರೋಪ ಕೆಲ ಸಿಬ್ಬಂದಿಯದು.

ಆಡಳಿತ ಮಂಡಳಿ ಇಲ್ಲದಿದ್ದರೂ ಸಮಸ್ಯೆಯಾಗಿಲ್ಲ. ನೀರು ನೈರ್ಮಲ್ಯ ಬೀದಿದೀಪ ನಿರ್ವಹಣೆ ಉತ್ತಮವಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಸಮಸ್ಯೆ ಅರಿಯುತ್ತಿದ್ದೇವೆ.
ಡಿ.ಎನ್‌.ಧರಣೇಂದ್ರಕುಮಾರ, ಮುಖ್ಯಾಧಿಕಾರಿ
ಉತಾರ ಪಡೆಯಬೇಕೆಂದರೆ ಏಜೆಂಟರ ಮೂಲಕವೇ ಹೋಗಬೇಕು. ಆರ್‌ಒ ಪ್ಲಾಂಟ್‌ಗಳಲ್ಲಿ ಸ್ವಚ್ಛತೆ ಇಲ್ಲ. ರಸ್ತೆಗಳು ದೂಳುಮಯವಾಗಿದ್ದು ಜನ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಅಧಿಕಾರಿಗಳು ಗಮನಹರಿಸಬೇಕು
ಡಾ.ಭೀಮನಗೌಡ ಜಾಲಿಹಾಳ, ವೈದ್ಯ
ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಕೆಲ ಪ್ರಭಾವಿಗಳು ಕಚೇರಿಯಲ್ಲೇ ಠಿಕಾಣಿ ಹೂಡಿರುತ್ತಾರೆ. ಯಾವುದೇ ಕೆಲಸಕ್ಕೆ ಮಧ್ಯವರ್ತಿಗಳ ಮೂಲಕವೇ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ
ವಜೀರಅಲಿ ಗೋನಾಳ, ಭಗತ್‌ಸಿಂಗ್ ಕ್ರೀಡಾ ಸಂಸ್ಥೆ, ಅಧ್ಯಕ್ಷ
ಉದ್ಯಾನ ಜಾಗಗಳು ಮುಳ್ಳುಕಂಟಿಗಳ ಕಾಡಿನಂತಾಗಿವೆ ಒಬ್ಬ ಸದಸ್ಯರಿಗೂ ಉದ್ಯಾನ ಅಭಿವೃದ್ಧಿಯ ಕಳಕಳಿ ಇಲ್ಲ.
ಶಂಕರ ಚಟ್ಟೇರ, ನಿವಾಸಿ
ಕುಷ್ಟಗಿ ನಾಲ್ಕನೇ ವಾರ್ಡ್‌ನಲ್ಲಿರುವ ಪುರಸಭೆ ಉದ್ಯಾನದಲ್ಲಿ ಮುಳ್ಳುಕಂಟಿ ಬೆಳೆದಿದೆ
ನಿರ್ಮಾಣಗೊಂಡ ವರ್ಷದೊಳಗೇ ಕುಷ್ಟಗಿ ಕುರುಬನಾಳ ಸಂಪರ್ಕ ರಸ್ತೆಯಲ್ಲಿ ಗುಂಡಿಗಳು ಕಂಡುಬಂದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.