ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದ ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈಯದ್ ಷಾ ಮುಸ್ತಾಫ್ ಖಾದ್ರಿ ಅವರ ಹಾಗೂ ಗುರು ಮುರ್ತುಜಾ ಖಾದ್ರಿ ಅವರ ಉರುಸ್‌ಗೆ ಶುಕ್ರವಾರ ಚಾಲನೆ ದೊರೆತಿದ್ದು, ಶನಿವಾರದ ಉರುಸ್ ಹಾಗೂ ಭಾನುವಾರ ಜಿಯಾರತ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಲಿದೆ.
ಹಿಂದೂ ಮತ್ತು ಮುಸ್ಲಿಮರ ಶ್ರದ್ಧೆಭಕ್ತಿಯ ಈ ದರ್ಗಾವು ಜಿಲ್ಲೆಯಲ್ಲಿ ಧಾರ್ಮಿಕ ಭಾವೈಕ್ಯತೆ ಸಾಕ್ಷಿಯಂತಿದೆ.
ಉರುಸ್ ಕಾರ್ಯಕ್ರಮದ ಅಂಗವಾಗಿ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದಿಂದ ಬಂದ ಮಹಾತ್ಮರ ಗಂಧವು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ನಂತರ ಬೆಳಗಟ್ಟಿ ಗ್ರಾಮಕ್ಕೆ ತಲುಪಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾವಿದರಿಂದ ಕೋಲಾಟ, ಹೆಜ್ಜೆ ಮೇಳ, ಕ್ಯಾಶಿಯೋ ವಾದ್ಯ ಹಾಗೂ ಸಕಲ ವಾದ್ಯ ಮೇಳದೊಂದಿಗೆ ದರ್ಗಾಕ್ಕೆ ಗಂಧ ಅರ್ಪಿಸಲಾಯಿತು.
ನಂತರ ಪರಂಪರಾಗತ ಪೀಠಾಧಿಕಾರಿ ಸಯ್ಯದ್ ಶಾ ಮೆಹಬೂಬ್ ಖಾದ್ರಿ ಅವರ ಅಮೃತ ಹಸ್ತದಿಂದ ಬೆಳಿಗ್ಗೆ ಮಹಾತ್ಮರ ಗದ್ದುಗೆಗೆ ಗಂಧ ಧರಿಸಲಾಗುವುದು. ಮಹಾತ್ಮರ ಝಂಡಾ ಮುಂಡರಗಿ ತಾಲ್ಲೂಕಿನ ಕೋರ್ಲಹಳ್ಳಿ ಗ್ರಾಮದಿಂದ ಬಂದಿದೆ.
ಮಾ.23 ರಂದು ಉರುಸ್ ಕಾರ್ಯಕ್ರಮ ಜರುಗಲಿದ್ದು, ಅಂದು ಮಹಾತ್ಮರ ಸಂಭಾಷಣೆ, ಸುಪ್ರಸಿದ್ಧ ಕವಾಲಿ ಹಾಡುಗಾರರಿಂದ ಕಾರ್ಯಕ್ರಮ, ರಿವಾಯತ್ ಪದಗಳು ಹಾಗೂ ಉರುಸಿನ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. 24 ರಂದು ಜಿಯಾರತ್ ಕಾರ್ಯಕ್ರಮ ಜರುಗಲಿದೆ. ಅಂದು ಮಾಹಾತ್ಮರ ದರ್ಗಾದ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ.
ಇಲ್ಲಿಯ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಭಾವ್ಯಕ್ಯದ ಉರುಸ್ ಆಚರಣೆಯಲ್ಲಿ ಕೊಪ್ಪಳ, ದಾವಣಗೆರೆ, ಗದಗ, ಬಳ್ಳಾರಿ, ಹಾವೇರಿ ಹಾಗೂ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಜನರು ಭಾಗವಹಿಸಲಿದ್ದಾರೆ.
ರಕ್ತದಾನ ಶಿಬಿರ: ಉರುಸ್ ಅಂಗವಾಗಿ ಮಾರ್ಚ್ 23 ರಂದು ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಹಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕವಲೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ, ಸ್ಥಳೀಯ ಸಂಘ ಸಂಸ್ಥೆಗಳ ಹಾಗೂ ಯುವಕರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.
ಹಜರತ್ ಸೈಯದ್ ಷಾ ಮುಸ್ತಾಫ್ ಖಾದ್ರಿಯವರ ಉರುಸ್ ಕಾರ್ಯಕ್ರಮ ಅತ್ಯಂತ ವಿಶೇಷವಾಗಿದ್ದು ಯಾವುದೇ ಜಾತಿ ಮತ ಧರ್ಮ ಎನ್ನದೇ ಎಲ್ಲರೂ ಒಟ್ಟಾಗಿ ಸೇರಿ ಶ್ರದ್ಧಾ ಭಕ್ತಿಯಿಂದ ಉರುಸ್ ಆಚರಿಸಲಾಗುತ್ತದೆ.ಸಯ್ಯದ್ ಮುಸ್ತಫಾ ಖಾದ್ರಿ ಉರ್ಫ್ ಅನ್ವರ್ ಸಾಹೇಬ, ದರ್ಗಾದ ಗುರುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.