ADVERTISEMENT

ವೆಂಕಟೇಶ್ವರ ದೇವಾಲಯಕ್ಕೆ ಅಗತ್ಯ ಅನುದಾನ: ಸಚಿವ ತಂಗಡಗಿ ಭರವಸೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:58 IST
Last Updated 16 ನವೆಂಬರ್ 2024, 13:58 IST
ಕಾರಟಗಿಯ ಲಕ್ಷ್ಮಿ ವೆಂಕಟೇಶ್ವರ ಕಾರ್ತಿಕೋತ್ಸವದ ನಿಮಿತ್ತ ನಡೆದ ವರ ಸತ್ಯನಾರಾಯಣಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು
ಕಾರಟಗಿಯ ಲಕ್ಷ್ಮಿ ವೆಂಕಟೇಶ್ವರ ಕಾರ್ತಿಕೋತ್ಸವದ ನಿಮಿತ್ತ ನಡೆದ ವರ ಸತ್ಯನಾರಾಯಣಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು   

ಕಾರಟಗಿ:‌ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಪೂರ್ಣ ಪ್ರಮಾಣದ ಅಭಿವೃದ್ದಿ ಕಾಮಗಾರಿಗೆ ಬೇಕಾದ ಹೆಚ್ಚುವರಿ ಅನುದಾನದ ಬಗ್ಗೆ ಕ್ರಿಯಾಯೋಜನೆ ಸಿದ್ದಪಡಿಸಲು ತಹಶೀಲ್ದಾರ್‌ ಜತೆಗೆ ಚರ್ಚಿಸಿ, ಅಗತ್ಯ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಶನಿವಾರ ಲಕ್ಷ್ಮಿ ವೆಂಕಟೇಶ್ವರ ಕಾರ್ತಿಕೋತ್ಸವದ ನಿಮಿತ್ತ  ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ನಿಮಿತ್ತ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರ ಬೇಡಿಕೆಯ ಬಗ್ಗೆ ಸ್ಪಂದಿಸಿ ಅವರು ಮಾತನಾಡಿದರು.

ಪ್ರಹ್ಲಾದ ಜೋಷಿ ನೇತೃತ್ವದಲ್ಲಿ ಸಾರ್ವಜನಿಕರು ಈ ಬಗ್ಗೆ ಸಚಿವರ ಗಮನ ಸೆಳೆದು, ಈಗಾಗಲೇ ಅಭಿವೃದ್ದಿಗೆ ಕಂದಾಯ ಇಲಾಖೆ ಮುಂದಾಗಿದೆ. ಅವರ ಬಳಿ ಇರುವ ₹ 8 ಲಕ್ಷ ಹಣ ಸಾಲದು ಹೆಚ್ಚುವರಿಯಾಗಿ ಇನ್ನೂ ₹ 6 ಲಕ್ಷ ಅನುದಾನ ಒದಗಿಸುವಂತೆ ಕೋರಿದರು.

ADVERTISEMENT

ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಲಾಗಿತ್ತು. ಬಳಿಕ ಅಧಿಕಾರಕ್ಕೆ ಬಂದವರು ಅನುದಾನ ನೀಡದೇ ಕಟ್ಟಡ ಅಪೂರ್ಣಗೊಂಡಿದೆ. ಯೋಜನಾ ವರದಿ ಸಿದ್ದಪಡಿಸಿ ದೇವಾಲಯದ ಆವರರಣದಲ್ಲಿಯ ಸಮುದಾಯ ಭವನದ ಕಟ್ಟಡ ಪೂರ್ಣಗೊಳಿಸಲಾಗುವುದು. ತಮ್ಮ ಅಧಿಕಾರಾವಧಿಯಲ್ಲಿ ಅನುದಾನ ನೀಡಲಾಗಿತ್ತು. ಬಳಿಕ ಬಂದವರು ಅನುದಾನ ಒದಗಿಸದಿರುವುದರಿಂದ ಪಟ್ಟಡ ಅಪೂರ್ಣವಾಗುಳಿದಿದೆ. ಶೀಘ್ರದಲ್ಲೇ ಯೋಜನಾ ವರದಿ ಮಾಡಿಸಿ ಅಗತ್ಯವಿರುವ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿದರು.


ಪುರುಷರಿಗೂ ಉಚಿತ ಬಸ್‌ ಪಾಸ್‌ ವಿಷಯದ ಬೇಡಿಕೆ ಇದೆ. ಈ ಬಗ್ಗೆ ಯಾವ ತೀರ್ಮಾನ ಕೈಗೊಂಡಿಲ್ಲ. ಇಂದು ನದಿಪಾತ್ರದ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಲಾಗುವುದು. ಪ್ರಾಥಮಿಕ ಅಂದಾಜಿನಂತೆ 2,095 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದೆ. ಸಮಗ್ರ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಹಿಂದಿನ ಹಾಗೂ ಕಳೆದ ತಿಂಗಳಲ್ಲಿ ಬೆಳೆ ಹಾನಿಯಾಗಿರುವ ರೈತರಿಗೆ ವಾರದೊಳಗೆ ಪರಿಹಾರ ಬಿಡುಗಡೆಗೊಳಿಸಲಾಗುವುದು. ಈಗಾ ಆಗಿರುವ ಹಾನಿಯ ವರದಿ ಕೈ ಸೇರಿದ ಬಳಿಕ ರೈತರಿಗೆ ಅಗತ್ಯ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ಪ್ರಮುಖರಾದ ಶರಣೇಗೌಡ ಮಾಲಿಪಾಟೀಲ್‌, ಉದ್ಯಮಿ ಸಿದ್ದನಗೌಡ, ಅಯ್ಯಪ್ಪ ಉಪ್ಪಾರ, ಉದಯಕುಮಾರ ಈಡಿಗೇರ, ಹೊನಗುಡಿ ವೀರೇಂದ್ರ, ಮಂಜುನಾಥ ಮೇಗೂರ, ರಾಗು ರೇವಣಕರ, ಆಂಜನೇಯ ಯಾಡ್ಕಿ, ವಿಜಯಕುಮಾರ ಕೋಲ್ಕಾರ ಉಪಸ್ಥಿತರಿದ್ದರು.

ಕಾರಟಗಿಯ ಲಕ್ಷ್ಮೀ ವೆಂಕಟೇಶ್ವರ ಕಾರ್ತಿಕೋತ್ಸವದ ನಿಮಿತ್ತ ದೇವಾಲಯಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರ ಸಮಸ್ಯೆ ಆಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.