ADVERTISEMENT

ಅಳವಂಡಿ: ಮಹಿಳಾ ಕಾರ್ಮಿಕರಿಗೆ ವರವಾದ ಬೇವಿನ ಹಣ್ಣು

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:30 IST
Last Updated 16 ಜುಲೈ 2021, 19:30 IST
ಅಳವಂಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೇವಿನ ಹಣ್ಣುಗಳನ್ನು ಸಂಗ್ರಹಿಸುತ್ತಿರುವ ಮಹಿಳೆಯರು
ಅಳವಂಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೇವಿನ ಹಣ್ಣುಗಳನ್ನು ಸಂಗ್ರಹಿಸುತ್ತಿರುವ ಮಹಿಳೆಯರು   

ಅಳವಂಡಿ: ಕೆಲವೆಡೆ ಮಳೆ ಇಲ್ಲದೇ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ದುಡಿಮೆ ಇಲ್ಲದೇ ಪರದಾಡುವ ಸ್ಥಿತಿಯಲ್ಲಿ ಇರುವ ಮಹಿಳೆಯರಿಗೆ ಬೇವಿನ ಹಣ್ಣುಗಳ ಸಂಗ್ರಹ ಕೆಲಸ ವರವಾಗಿ ಪರಿಣಮಿಸಿದೆ.

ಪ್ರಸ್ತಕ ವರ್ಷದಲ್ಲಿ ಕೋವಿಡ್ ರೋಗದ ಭೀತಿ ಕಾಡುತ್ತಿರುವ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಸಂಕಷ್ಟ ಎದುರಾಗಿದೆ. ಅಂತಹ ಸಂದರ್ಭದಲ್ಲಿ ಬೇವಿನ ಹಣ್ಣು ಸಂಗ್ರಹಿಸುವ ಕೆಲಸ ಅವರಿಗೆಆಸರೆಯಾಗಿದೆ. ಈ ಕೆಲಸ ಅಡವಿ, ಜಮೀನುಗಳಲ್ಲಿ ಇರುವುದರಿಂದ ಹಾಗೂ ಕುಟುಂಬದ ಸಮೇತ ಕೆಲಸದಲ್ಲಿ ತೊಡಗುವುದರಿಂದ ರೋಗ ಭೀತಿ ಕಡಿಮೆ ಇದೆ. ಮಕ್ಕಳು ಸಹ ಮನೆಯಲ್ಲಿ ಪಾಲಕರೊಂದಿಗೆ ಅಡವಿಗೆ ತೆರಳಿ ಬೇವಿನ ಹಣ್ಣು ಸಂಗ್ರಹಿಸುವ ಕೆಲಸದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.

ಮುಂಗಾರು ಮಳೆ ಆರಂಭವಾಗುವ ಮೊದಲು ಕೃಷಿ ಕಾರ್ಮಿಕರಿಗೆ ಅದರಲ್ಲೂ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಕೆಲಸಗಳು ಕಡಿಮೆಯಾಗಿವೆ. ಇಂತಹ ಸಂದರ್ಭದಲ್ಲಿ ಬೇವಿನ ಹಣ್ಣು ಆರಿಸುವ ಕಾಯಕ ಮಹಿಳಾ ಕಾರ್ಮಿಕರ ಬದುಕಿಗೆ ಅನುಕೂಲವಾಗಿದೆ.

ADVERTISEMENT

ಪ್ರತಿ ವರ್ಷ ಮೇ ತಿಂಗಳಿನಲ್ಲಿ ಆರಂಭವಾಗುವ ಈ ಕೆಲಸ ಜೂನ್, ಜುಲೈ ತಿಂಗಳ ತನಕವೂ ನಡೆಯುತ್ತದೆ.

ಹೆಚ್ಚಾಗಿ ಮಸಾರಿ ಭಾಗದಲ್ಲಿ ಬೇವಿನ ಮರಗಳು ಬೆಳೆದಿರುತ್ತವೆ. ಗಾಳಿ ಬೀಸುವ ಸಂದರ್ಭದಲ್ಲಿ ಬೇವಿನ ಹಣ್ಣುಗಳು ಉದುರಿ ಬಿಳುತ್ತಿದ್ದು, ಮಹಿಳೆಯರು ರಸ್ತೆ ಬದಿಗಳಲ್ಲಿ ಹಾಗೂ ಹೊಲದ ಬದುಗಳಲ್ಲಿ ಬೇವಿನ ಹಣ್ಣನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗುತ್ತಾರೆ. ನಂತರ ಅವುಗಳನ್ನು ಮನೆಯ ಅಂಗಳ, ಹಿತ್ತಲಲ್ಲಿ ಒಣ ಹಾಕುತ್ತಾರೆ. ಅವುಗಳನ್ನು ಖರೀದಿ ಮಾಡುವವರು ಗ್ರಾಮದ ಒಬ್ಬರನ್ನು ಮಧ್ಯವರ್ತಿಗಳಾಗಿ ಮಾಡಿ, ಆ ಮೂಲಕ ಸ್ವಲ್ಪ ಹಣವನ್ನು ಮುಂಗಡವಾಗಿ ಕೊಡುತ್ತಾರೆ. ನಂತರ ಖರೀದಿಸುವಾಗ ಉಳಿದ ಹಣ ಕೊಟ್ಟು ಬೇವಿನ ಹಣ್ಣನ್ನು ಖರೀದಿಸುತ್ತಾರೆ. ಇದರಿಂದ ಮಹಿಳೆಯರ ಕುಟುಂಬಕ್ಕೆ ಅನುಕೂಲವಾಗುತ್ತದೆ.

ಡಬ್ಬಿಗೆ ₹ 170 ನೀಡುತ್ತಾರೆ. ಕಳೆದ ವರ್ಷ ಒಂದು ಡಬ್ಬಿ ಬೇವಿನ ಹಣ್ಣಿಗೆ ₹ 60 ರಿಂದ ₹ 80 ಇತ್ತು. ಈ ವರ್ಷ ₹ 170 ವರೆಗೂ ಮಾರಾಟವಾಗಿವೆ. ಪ್ರತಿ ಚಿಲಕ್ಕೆ ₹ 600 ಸಿಗುತ್ತದೆ. ದುಡಿಮೆ ಇಲ್ಲದೇ ಮನೆಯಲ್ಲೇ ಇದ್ದ ಮಹಿಳಾ ಕಾರ್ಮಿಕರಿಗೆ ಬೇವಿನ ಹಣ್ಣುಗಳು ಬದುಕಿಗೆ ಆಸರೆಯಾಗಿವೆ.

ಉಪಯೋಗ: ಮಹಿಳೆಯರು ಸಂಗ್ರಹಿಸುವ ಬೇವಿನ ಹಣ್ಣಿನ ಬೀಜಕ್ಕೆ ಬಹಳ ಬೇಡಿಕೆ ಇದ್ದು. ಬೇವಿನ ಹಣ್ಣನ್ನು ಗೊಬ್ಬರ ತಯಾರಿಕೆಗೆ, ಬೇವಿನ ಎಣ್ಣೆಗೆ, ಸೌಂದರ್ಯ ವರ್ದಕ ಹಾಗೂ ಔಷಧ ತಯಾರಿಕೆಗೆ ಬಳಸಲಾಗುತ್ತದೆ.

* ಕೊರೊನಾ ಲಾಕ್‌ಡೌನ್‌ನಿಂದಾಗಿ ಕೂಲಿ ಕೆಲಸಗಳು ಕಡಿಮೆಯಾಗಿವೆ. ಇಂತಹ ಸಂದರ್ಭದಲ್ಲಿ ಬೇವಿನ ಹಣ್ಣು ಆರಿಸುವ ಕೆಲಸ ನಮ್ಮ ಬದುಕಿಗೆ ಸಹಕಾರಿಯಾಗಿದೆ.

-ಯಲ್ಲವ್ವ, ಬೇವಿನ ಬೀಜ ಆರಿಸುವ ಮಹಿಳೆ.

* ಜಮೀನುಗಳಲ್ಲಿ ಕೆಲಸವಿಲ್ಲದ ಸಂದರ್ಭದಲ್ಲಿ ಮಹಿಳೆಯರಿಗೆ ಬೇವಿನ ಬೀಜ ಕೆಲಸ ನೀಡಿದೆ. ಸುಮಾರು ಎರಡು ತಿಂಗಳವರೆಗೂ ಈ ಕಾರ್ಯ ನಡೆಯಲಿದೆ. ಹಣ ಕೂಡ ತಕ್ಷಣ ಸಿಗಲಿದೆ. ಖರೀದಿಗಾರರು ಮುಂಗಡವಾಗಿ ಹಣ ಕೊಡುತ್ತಾರೆ.

-ಮುದಕವ್ವ ಹರಿಜನ, ಮಧ್ಯವರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.