ಕುಷ್ಟಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೇವಿನಬೀಜದ ಆವಕವಾಗುತ್ತಿದ್ದು, ಪ್ರಸಕ್ತ ವರ್ಷ ಆರಂಭದಲ್ಲೇ ಬೇವಿಗೆ ಉತ್ತಮ ಬೆಲೆ ಬಂದಿದೆ. ಕಹಿಯಾದ ಬೇವು ಜನರ ಪಾಲಿಗೆ ಸಿಹಿಯಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಬೇವಿನ ಪ್ರಮುಖ ಮಾರುಕಟ್ಟೆ ಇದಾಗಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಇಲ್ಲಿಗೆ ಮಾರಾಟಕ್ಕೆ ತರಲಾಗುತ್ತಿದೆ. ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ ಮಾರುಕಟ್ಟೆಗೆ ಬೇವಿನಬೀಜದ ಆವಕ ಬಹಳಷ್ಟು ಕಡಿಮೆಯಾಗಿದೆ. ಜೂನ್–ಜುಲೈ ಮಧ್ಯದಲ್ಲಿ ಬೇವಿನ ಬೀಜ ಬಹಳಷ್ಟು ಪ್ರಮಾಣದಲ್ಲಿ ಆವಕವಾಗಿ ಅಳತೆ ಮಾಡುವುದು, ಚೀಲಗಳನ್ನು ತುಂಬಿ ಲಾರಿಗಳಿಗೆ ಭರ್ತಿ ಮಾಡುವುದು ಸಾಮಾನ್ಯವಾಗಿರುತ್ತಿತ್ತು. ಅದರಿಂದ ಇಡೀ ಮಾರುಕಟ್ಟೆಯಲ್ಲಿ ಬೇವಿನ ಕಹಿ ಘಾಟು ಆವರಿಸುತ್ತಿರುತ್ತಿತ್ತು. ಆದರೆ ಈ ಬಾರಿ ಅಂಥ ದೃಶ್ಯ ಕಂಡುಬರುತ್ತಿಲ್ಲ.
ಕೃಷಿಕಾರ್ಮಿಕರು, ರೈತ ಮಹಿಳೆಯರಿಗೆ ಈ ಸಂದರ್ಭದಲ್ಲಿ ಒಂದಷ್ಟು ಆದಾಯ ತರುವಂತಿದ್ದರೂ ಈ ವರ್ಷ ಬೇವಿನ ಇಳುವರಿ ತೀರಾ ಕಡಿಮೆ ಇರುವುದು ಕಂಡುಬಂದಿದೆ. ವಾತಾವರಣ ವೈಪರೀತ್ಯದಿಂದ ಗಿಡಗಳಲ್ಲಿ ಬೇವು ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗಿದೆ ಎಂದು ರೈತರು ವಿವರಿಸಿದರು.
ಕಳೆದ ಜೂನ್ ಎರಡನೇ ವಾರದಲ್ಲಿ ಪ್ರತಿ ಚೀಲ (ಅಂದಾಜು 50 ಕೆ.ಜಿ) ಕನಿಷ್ಠ ₹450 ರಿಂದ ಆಗಷ್ಟ್ ತಿಂಗಳ ಅಂತ್ಯದ ವೇಳೆಗೆ ಗರಿಷ್ಠ ₹900 ಧಾರಣೆ ದೊರೆತಿತ್ತು. ಆದರೆ ಈಗಲೇ ದರ ₹1000ದಷ್ಟು ಇದೆ. ಆವಕ ಕಡಿಮೆ ಇರುವುದರಿಂದ ಕೆಲ ವ್ಯಾಪಾರಿಗಳು ಇನ್ನೂ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇವಿಗೆ ಸಾಕಷ್ಟು ದರ ದೊರೆಯುವ ನಿರೀಕ್ಷೆ ಇದೆ ಎಂದು ಎಪಿಎಂಸಿಯಲ್ಲಿನ ವರ್ತಕರು ವಿವರಿಸಿದರು.
ಈಗಲೇ ಉತ್ತಮ ದರ ದೊರಕಿರುವುದಕ್ಕೆ ರೈತರಾದ ಹಿರೇಮನ್ನಾಪುರದ ಬಸವರಾಜಪ್ಪ, ಕಂದಕೂರಿನ ಹನುಮಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದರು.
ಮಾರುಕಟ್ಟೆ: ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಇಲ್ಲಿಯ ಬೇವಿಗೆ ಬೇಡಿಕೆ ಇದ್ದು, ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಈ ಬಾರಿ ಸಾಧ್ಯವಾಗಲಿಕ್ಕಿಲ್ಲ. ಆಂಧ್ರಪ್ರದೇಶದ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಮತ್ತಷ್ಟೂ ದರ ಏರಿಕೆಯಾಗುತ್ತದೆ ಎಂದು ದಲ್ಲಾಳಿ ವ್ಯಾಪಾರಿಗಳು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.