ಅಳವಂಡಿ: ‘ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ನಿಲೋಗಿಪುರ ಗ್ರಾಮಸ್ಥರು, ನಿಲೋಗಿಪುರ–ಹಿರೇಹಳ್ಳ ಸಂಪರ್ಕಿಸುವ ನೆಲಮಟ್ಟದ ಸೇತುವೆಯನ್ನು ನಿರ್ಮಿಸಲು ಮುಂದಾಗಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದೆ ಹಿರೇಹಳ್ಳಕ್ಕೆ ನೆಲಮಟ್ಟದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಪ್ರವಾಹದಿಂದಾಗಿ ಸೇತುವೆಯ ಕಲ್ಲುಗಳು ಕಿತ್ತು ಹೋಗಿದ್ದು, ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ನಿಲೋಗಿಪುರ, ಹಲವಾಗಲಿ ಹಾಗೂ ಕೇಸಲಾಪುರ ಗ್ರಾಮಸ್ಥರು ಆಸ್ಪತ್ರೆಗೆ, ವ್ಯಾಪಾರ ವಹಿವಾಟುಗೆ ಅಳವಂಡಿಗೆ ತೆರಳಲು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆ ಮಧ್ಯೆ ಹಿರೇಹಳ್ಳ ಬರುತ್ತದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಸೇತುವೆ ಕಿತ್ತು ಹೋಗಿದ್ದರಿಂದ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಇವೆ. ಇತ್ತೀಚೆಗೆ ಕೆಕೆಆರ್‌ಟಿಸಿ ಬಸ್‌ವೊಂದು ಸೇತುವೆ ಮೇಲೆಯೇ ಸಿಕ್ಕಿಹಾಕಿಕೊಂಡಿತ್ತು. ಹಲವರು ಬೈಕ್ ಮೇಲಿಂದ ಬಿದ್ದು ಕೈ–ಕಾಲು ಮುರಿದುಕೊಂಡಿರುವ ಘಟನೆಗಳೂ ನಡೆದಿವೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಂಚಾರಕ್ಕೆ ನಿತ್ಯ ತೊಂದರೆ ಆಗುತ್ತಿರುವುದನ್ನು ಮನಗಂಡ ನಿಲೋಗಿಪುರ ಹಾಗೂ ಹಲವಾಗಲಿ ಗ್ರಾಮಸ್ಥರು, ‘ತಮ್ಮ ಸ್ವಂತ ಹಣದಿಂದ ಹಿರೇಹಳ್ಳದ ನೆಲಮಟ್ಟದ ಸೇತುವೆಯನ್ನು ದುರಸ್ತಿಗೊಳಿಸಲು ಮುಂದಾಗಿದ್ದಾರೆ. ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ಕಲ್ಲು, ಮಣ್ಣು ಹಾಕಿ, ನೆಲಮಟ್ಟದ ಸೇತುವೆ ಮೇಲೆ ಸಂಚರಿಸಲು ಅನುಕೂಲವಾಗುವಂತೆ ದುರಸ್ತಿ ಗೊಳಿಸಿದರು. ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.
ನಿಲೋಗಿಪುರ, ಹಲವಾಗಲಿ ಹಾಗೂ ಕೇಸಲಾಪುರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಿಕ್ಷಣ, ಆರೋಗ್ಯ, ಕೂಲಿ ಕೆಲಸ, ಕಚೇರಿ ಕಾರ್ಯಕ್ಕೆ ಅಳವಂಡಿ ಹೋಬಳಿ ಕೇಂದ್ರ ಅವಲಂಬಿಸಿದ್ದಾರೆ. ಆದರೆ ಅಳವಂಡಿ ಹೋಗಬೇಕಾದರೆ ಹಿರೇಹಳ್ಳದ ಮೂಲಕ ಹಾದು ಹೋಗಿರುವ ರಸ್ತೆಯ ಮೂಲಕ ತೆರಳುತ್ತಾರೆ. ಇಲ್ಲಿನ ನೆಲಮಟ್ಟದ ಸೇತುವೆ ಹಾಳಾಗಿದ್ದರಿಂದ ಜನರಿಗೆ ಕಷ್ಟಕರವಾಗಿದೆ.
ಹಿರೇಹಳ್ಳ ಮಳೆಗಾಲ ಉಕ್ಕಿ ಹರಿಯುವ ಹಳ್ಳದಿಂದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ನೆಲಮಟ್ಟದ ಸೇತುವೆ ಗುಂಡಿಮಯವಾಗಿದ್ದು, ಕಲ್ಲುಗಳು ಕಿತ್ತು ಹೋಗಿದೆ. ಸಾರ್ವಜನಿಕರು ಸಂಚರಿಸಲು ಸರ್ಕಸ್ ಮಾಡುವಂತಾಗಿದೆ. ಸೇತುವೆ ದುರಸ್ತಿಗೊಳಿಸಬೇಕು ಎಂದು ಹಲವು ಬಾರಿ ಕೊಪ್ಪಳ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.