ADVERTISEMENT

ಕೊಪ್ಪಳ: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌; ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಜಿಲ್ಲೆಯಲ್ಲಿರುವ ನಾಲ್ಕು ಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ 1.25 ಲಕ್ಷ ಮಾತ್ರ ಅಳವಡಿಕೆ

Sarikashree KC
Published 14 ಸೆಪ್ಟೆಂಬರ್ 2024, 7:01 IST
Last Updated 14 ಸೆಪ್ಟೆಂಬರ್ 2024, 7:01 IST
.
.   

ಕೊಪ್ಪಳ: ದೇಶದಾದ್ಯಂತ ಎಲ್ಲಾ ಮೋಟಾರು ವಾಹನಗಳಿಗೆ ಒಂದೇ ರೀತಿಯ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಒಂದು ವರ್ಷವೇ ಉರುಳಿದರೂ ಜಿಲ್ಲೆಯಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇಂದ್ರ ಸಾರಿಗೆ ಇಲಾಖೆಯಿಂದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಒಂದೇ ರೀತಿಯ ನಂಬರ್ ಪ್ಲೇಟ್ ಅಳವಡಿಸುವಂತೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಸೂಚಿಸಲಾಗಿತ್ತು. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಈ ಕುರಿತು ಜವಾಬ್ದಾರಿ ನೀಡಿ ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಒಂದು ವರ್ಷದ ಅವಧಿಯಲ್ಲಿ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿದ್ದರಿಂದ ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲದ ಕಾರಣ ಜಿಲ್ಲೆಯಲ್ಲಿ ಜನ ಎಚ್‌ಎಸ್‌ಆರ್‌ಪಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಿಲ್ಲ.

ಜಿಲ್ಲೆಯಲ್ಲಿಯಲ್ಲಿರುವ ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ 1,25,200 ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲಾಗಿದೆ. ಸೆ. 15 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಹೊಸ ನಂಬರ್‌ ಪ್ಲೇಟ್ ಪಡೆದುಕೊಳ್ಳದಿದ್ದರೆ ಮೊದಲ ಹಂತದಲ್ಲಿ ₹500 ದಂಡ ಬೀಳಲಿದೆ. 15ರ ಒಳಗೆ ಆನ್‌ಲೈನ್ ಮೂಲಕ ನಂಬರ್‌ ಪ್ಲೇಟ್‌ ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡು ಅದರ ರಸೀದಿ ಇಟ್ಟುಕೊಂಡರೆ ಯಾವುದೇ ದಂಡ ಬೀಳುವುದಿಲ್ಲ. ಇಲ್ಲವಾದರೆ ದಂಡ ನಿಶ್ಚಿತ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು.

ADVERTISEMENT

2019ರ ಬಳಿಕ ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನೇ ಅಳವಡಿಸಲಾಗುತ್ತಿದೆ. ಅದಕ್ಕೂ ಮೊದಲು ಖರೀದಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಗತ್ಯವಾಗಿದೆ.

ಸಾರಿಗೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಹೊಸ ಮಾದರಿಯ ನಂಬರ್‌ ಪ್ಲೇಟ್ ಅಳವಡಿಕೆ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ. ರಸ್ತೆ ಸುರಕ್ಷತಾ ಹಾಗೂ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದಾಗಲೂ ಜನರಿಗೆ ಈ ಕುರಿತು ತಿಳಿ ಹೇಳಲಾಗಿದೆ. ಇಷ್ಟು ದಿನಗಳ ಕಾಲ ಹಲವು ಬಾರಿ ದಿನಾಂಕ ವಿಸ್ತರಣೆ ಮಾಡಿದ್ದರಿಂದ ಜನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸೆ. 15ರ ಬಳಿಕ ದಂಡ ಹಾಕಲು ಶುರು ಮಾಡಿದ ಬಳಿಕವಾದರೂ ಗಂಭೀರವಾಗಿ ಪರಿಗಣಿಸುತ್ತಾರೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಅಧಿಕಾರಿಗಳು.   

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಲು ಅವಕಾಶ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ನಾಳೆಯೇ ಕೊನೆಯ ದಿನ ಹೊಸ ಮಾದರಿಯ ನಂಬರ್‌ ಪ್ಲೇಟ್ ಇಲ್ಲದಿದ್ದರೆ ಬೀಳಲಿದೆ ದಂಡ
ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು ವಾಹನಗಳ ಸವಾರರು ಆದಷ್ಟು ಬೇಗನೆ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬೇಕು.
ಎಲ್.ಬಿ. ನಾಲವಾರ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.