ADVERTISEMENT

ಕೊಪ್ಪಳ | ವಿಮಾನ ನಿಲ್ದಾಣ; ರಾಜಕೀಯ ವಾಕ್ಸಮರ

ಉದ್ದೇಶಿತ ನಿಲ್ದಾಣಕ್ಕಾಗಿ ಜಾಗ ಪರಿಶೀಲಿಸಿರುವ ಪ್ರಾಧಿಕಾರದ ಅಧಿಕಾರಿಗಳು

ಪ್ರಮೋದ
Published 5 ಜುಲೈ 2024, 4:43 IST
Last Updated 5 ಜುಲೈ 2024, 4:43 IST
<div class="paragraphs"><p>ಮಾದರಿ ಚಿತ್ರ</p></div>

ಮಾದರಿ ಚಿತ್ರ

   

ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಜಿಲ್ಲೆಯ ಜನರಿಂದ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಇದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೀಸಲಿಟ್ಟಿದ್ದ ₹40 ಕೋಟಿ ಅನುದಾನ ಬೇರೆ ಕಾಮಗಾರಿಗೆ ಬಳಸಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಪತ್ರ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಶಾಸಕರ ಪತ್ರದ ವಿರುದ್ಧ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು ರಾಘವೇಂದ್ರ ಹಿಟ್ನಾಳ ಪತ್ರ ವಾಪಸ್‌ ಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಅವರು ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಪ್ರಯತ್ನಿಸಿದ್ದರು. ರಾಜ್ಯ ಸರ್ಕಾರ ಬಜೆಟ್‌ನಲ್ಲಿಯೂ ಘೋಷಣೆ ಮಾಡಿತ್ತು. ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡ ಕೊಪ್ಪಳ ತಾಲ್ಲೂಕಿನ ತಾಳಕನಕಪುರ, ಬುಡಶೆಟ್ನಾಳ್, ಹಟ್ಟಿ ಮತ್ತು ಕಲಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ 382 ಎಕರೆ, ವಗದನಾಳ ಹಾಗೂ ಕುಕನೂರು ತಾಲ್ಲೂಕಿನ ಲಕಮಾಪುರ ಗ್ರಾಮ ವ್ಯಾಪ್ತಿಯಲ್ಲಿ 352 ಎಕರೆ ಜಮೀನಿನ ಜಾಗ ಪರಿಶೀಲನೆ ನಡೆಸಿದೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಧಿಕಾರಿಗಳ ತಂಡ ’ಪ್ರಾಥಮಿಕ ಸಾಧ್ಯತಾ ವರದಿ’ ನೀಡಿದೆ.

ವಿಮಾನ ನಿಲ್ದಾಣ ನಿರ್ಮಾಣವಾದರೆ ನೆರೆಯ ವಿಶ್ವ ವಿಖ್ಯಾತ ಹಂಪಿ, ಜಿಲ್ಲೆಯ ಅಂಜನಾದ್ರಿ, ಹುಲಿಗಿ, ಕನಕಗಿರಿ ಸೇರಿದಂತೆ ಅನೇಕ ಸ್ಥಳಗಳನ್ನು ನೋಡುವುದು ಜನರಿಗೆ ಸುಲಭವಾಗಿ ಸಾರಿಗೆ ವ್ಯವಸ್ಥೆಯೂ ಸುಧಾರಿಸುತ್ತದೆ ಎನ್ನುವುದು ಸಂಗಣ್ಣ ಕರಡಿ ಅವರ ಉದ್ದೇಶವಾಗಿತ್ತು. ಹಿಟ್ನಾಳ ಅವರ ಪತ್ರ ಮತ್ತು ’ವಿಮಾನ ನಿಲ್ದಾಣ ಮಂಜೂರಾದರೆ ₹100 ಕೋಟಿ ನೀಡಲಾಗುವುದು’ ಎಂದು ನೀಡಿರುವ ಹೇಳಿಕೆ ಬೇರೆ ಪಕ್ಷಗಳ ನಾಯಕರನ್ನು ಕೆರಳಿಸಿದೆ.

ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ಹೋರಾಟ ಮಾಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ್‌ ಈಗಾಗಲೇ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಜೆಡಿಎಸ್‌ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಕೂಡ ಹೋರಾಟದ ಮಾತುಗಳನ್ನಾಡಿದ್ದು ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಅನುದಾನ ಬಳಸಿದರೆ ಹೋರಾಟ: ಸಿವಿಸಿ

ಕೊಪ್ಪಳ: ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನ ಬೇರೆ ಕಾರ್ಯಗಳಿಗೆ ಬಳಸುವ ನಿರ್ಧಾರದಿಂದ ಶಾಸಕ ಹಿಟ್ನಾಳ ಹಿಂದೆ ಸರಿಯಬೇಕು ಎಂದು ಜೆಡಿಎಸ್‌ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಅಭಿವೃದ್ಧಿ ಹೆಸರಿನಲ್ಲಿ ಮತ ಪಡೆದ ಶಾಸಕ ಹಿಟ್ನಾಳ ಅಭಿವೃದ್ಧಿ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ತಮ್ಮ ನಿರ್ಧಾರಕ್ಕೆ ಮತದಾರರ ಕ್ಷಮೆ ಕೋರಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ವಿಮಾನ ನಿಲ್ದಾಣ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ‘ವಿಮಾನ ನಿಲ್ದಾಣಕ್ಕೆ ಅನುಮತಿ ಲಭಿಸಿದ ಬಳಿಕ ₹100 ಕೋಟಿ ಬಿಡುಗಡೆ ಮಾಡಿಸುತ್ತೇನೆ ಎಂಬುದು ದಾರಿ ತಪ್ಪಿಸುವ ಹೇಳಿಕೆ. ಅನುಮತಿ ಪಡೆದುಕೊಳ್ಳುವಲ್ಲಿ ಅವರು ಇಲ್ಲಿಯ ತನಕ ಮಾಡಿದ ಕೆಲಸವಾದರೂ ಏನು. ಶೀಘ್ರದಲ್ಲಿಯೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿಮಾನ ನಿಲ್ದಾಣ ಕಾಮಗಾರಿ ಅನುಷ್ಠಾನಕ್ಕೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡುವಂತೆ ಕೋರುತ್ತೇನೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.