ADVERTISEMENT

ಅಳವಂಡಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಕ್ಕೆ ಬಯಲೇ ಗತಿ

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸ್ಥಿತಿ

ಜುನಸಾಬ ವಡ್ಡಟ್ಟಿ
Published 23 ನವೆಂಬರ್ 2023, 0:18 IST
Last Updated 23 ನವೆಂಬರ್ 2023, 0:18 IST
ಅಳವಂಡಿ ಗ್ರಾಮದ ಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ‌ ಹೊರನೋಟ
ಅಳವಂಡಿ ಗ್ರಾಮದ ಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ‌ ಹೊರನೋಟ   

ಅಳವಂಡಿ: ಇಲ್ಲಿನ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ಶೌಚಕ್ಕೆ ಬಯಲನ್ನೇ ಆಶ್ರಯಿಸುವಂತಾಗಿದೆ.

ಈ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೆ 305 ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಹತ್ತು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದರಿಂದ ಬಯಲು ಹಾಗೂ ಗಿಡಗಂಟಿಗಳ ಮರೆಯೇ ಶೌಚದ ತಾಣವಾಗಿದೆ.

ಈ ಹಿಂದೆ ನಿರ್ಮಿಸಿದ ಶಾಲೆಯ ಶೌಚಾಲಯಗಳು ಶಿಥಿಲಗೊಂಡಿವೆ. ಗೋಡೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿವೆ. ನಂತರ, ತಾಲ್ಲೂಕು ಪಂಚಾಯಿತಿ ವತಿಯಿಂದ ಶೌಚಾಲಯ ನಿರ್ಮಾಣ ಕಾರ್ಯ ಕೈಗೆತ್ತಿಗೊಳ್ಳಲಾಗಿತ್ತು. ಕಾಮಗಾರಿ ಅಪೂರ್ಣಗೊಂಡಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರಿಗೆ ಸದ್ಯಕ್ಕೆ ಶೌಚಾಲಯ ಇಲ್ಲದಂತಾಗಿದೆ.

ADVERTISEMENT

ಶಾಲೆಗೆ ಶೌಚಾಲಯ ನಿರ್ಮಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ವಿದ್ಯಾರ್ಥಿನಿಯರ ಪಾಲಕರು ಒತ್ತಾಯಿಸಿದ್ದಾರೆ.

‘ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಾರದೊಳಗೆ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಅಳವಂಡಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಕೊಟ್ರಪ್ಪ ತಿಳಿಸಿದರು.

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಥಿಲಗೊಂಡ ಶೌಚಾಲಯ
ಅಪೂರ್ಣಗೊಂಡ ಶೌಚಾಲಯ

Highlights - ಶಿಕ್ಷಕರು, ವಿದ್ಯಾರ್ಥಿನಿಯರ ಪರದಾಟ ಶೌಚಾಲಯ ಇಲ್ಲದ ಶೋಚನೀಯ ಸ್ಥಿತಿ

ಶೌಚಾಲಯ ನಿರ್ಮಿಸುವಂತೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು

-ಸುರೇಂದ್ರಗೌಡ ಪಾಟೀಲ ಮುಖ್ಯ ಶಿಕ್ಷಕ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಅಳವಂಡಿ

ಶಾಲೆಯ ನಿರ್ವಹಣೆಗೆ ಇತ್ತೀಚೆಗೆ ಹಣ ನೀಡಲಾಗಿದೆ. ಈ ಹಣದಲ್ಲಿ ಶೌಚಾಲಯ ದುರಸ್ತಿ ಮಾಡಿಕೊಳ್ಳಬೇಕು. ಪ್ರತಿಸಲವೂ ಹೊಸದಾಗಿ ನಿರ್ಮಿಸಿಕೊಡಲು ಹೇಗೆ ಸಾಧ್ಯ?

-ಶ್ರೀಶೈಲ ಬಿರಾದಾರ ಡಿಡಿಪಿಐ ಕೊಪ್ಪಳ

‘ಶೌಚಾಲಯ ನಿರ್ಮಿಸಿ ಪುಣ್ಯ ಕಟ್ಕೊಳ್ಳಿ’

‘ನಮ್ಮ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದರಿಂದ ಬಯಲನ್ನೇ ಅವಲಂಬಿಸಿದ್ದೇವೆ. ಬಯಲಿನಲ್ಲಿ ಬಹಳಷ್ಟು ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿ’ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.