ADVERTISEMENT

ಅಳವಂಡಿ: ಶೌಚಾಲಯ ಇಲ್ಲದೇ ವಿದ್ಯಾರ್ಥಿಗಳ ಪರದಾಟ

ಶೌಚಾಲಯಕ್ಕಾಗಿ ವಿದ್ಯಾರ್ಥಿಗಳ ಮನವಿ: ಗ್ರಾ.ಪಂ ಭರವಸೆ

ಜುನಸಾಬ ವಡ್ಡಟ್ಟಿ
Published 14 ಆಗಸ್ಟ್ 2024, 6:06 IST
Last Updated 14 ಆಗಸ್ಟ್ 2024, 6:06 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹೋರನೋಟ
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹೋರನೋಟ   

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಜತೆಗೆ ಪೋಷಕರಿಂದಲೂ ಅಸಮಾಧಾನ ವ್ಯಕ್ತವಾಗಿದೆ.

ಸರ್ಕಾರ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ ಅನುದಾನ ಎಲ್ಲಿ ಖರ್ಚಾಗುತ್ತಿದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಪ್ರೌಢಶಾಲೆಯಲ್ಲಿ ಬಾಲಕರು ಹಾಗೂ ಬಾಲಕಿಯರು ಸೇರಿ ಒಟ್ಟು 307 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 12 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶೌಚಾಲಯ ಇಲ್ಲದಂತಾಗಿದೆ.

ADVERTISEMENT

ಶಾಲೆಯಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಯಲನ್ನು ಅವಲಂಬಿಸಿದ್ದಾರೆ. ಹಿಂದೆ ನಿರ್ಮಿಸಿದ ಶೌಚಾಲಯಗಳು ಹಾಳಾಗಿದ್ದು, ದುಸ್ಥಿತಿಯಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳು ಬಯಲನ್ನು ಆಶ್ರಯಿಸಿ, ಬೇಕಾದ ಅನಿವಾರ್ಯ ಎದುರಾಗಿದೆ.

ಗ್ರಾಮದ ಪ್ರೌಢಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಇಲ್ಲಿನ ಸ್ಥಳೀಯ ಆಡಳಿತ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇಲ್ಲದೇ ಇರುವುದು ಶೋಚನೀಯ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೌಚಾಲಯ ನಿರ್ಮಾಣ ಮುಂದಾಗಬೇಕು ಎಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಿತ್ಯ ಶೌಚಕ್ಕೆ ತೆರಳಲು ಮುಜುಗರ ಉಂಟಾಗುತ್ತಿದೆ. ಶೌಚಾಲಯ ಇಲ್ಲದಿರುವುದರಿಂದ ನಿತ್ಯ ಪರದಾಡುವುದು ಹಾಗೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ನಮ್ಮ ಶಾಲೆಯಲ್ಲಿ ನೂತನ ಶೌಚಾಲಯ ನಿರ್ಮಾಣ ಮಾಡಿ, ನಮಗೆಲ್ಲ ಅನುಕೂಲ ಕಲ್ಪಿಸಬೇಕು ಎಂದು ಶಾಲೆಯ ವಿದ್ಯಾರ್ಥಿಗಳು ಮನವಿ ಮಾಡಿದರು.

ಬೆಟಗೇರಿ ಪ್ರೌಢ ಶಾಲೆಯ ಶೌಚಾಲಯದ ದುಸ್ಥಿತಿ.
ಬೆಟಗೇರಿ ಪ್ರೌಢಶಾಲೆಗೆ ಶೌಚಾಲಯ ನಿರ್ಮಾಣ ಮಾಡಲು ನರೇಗಾ ಯೋಜನೆ ಅಡಿ ಹಾಗೂ ಶಿಕ್ಷಣ ಇಲಾಖೆಯ ವಂತಿಗೆ ಹಣ ಸೇರಿ ₹5.20 ಲಕ್ಷ ಹಣ ಮಂಜೂರಾಗಿದೆ. ಕೂಡಲೇ ಶೌಚಾಲಯ ನಿರ್ಮಾಣ ಮಾಡಲಾಗುವುದು
-ದಾನಪ್ಪ ಬೆಟಗೇರಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.