ಕುಷ್ಟಗಿ: ದತ್ತು ಗ್ರಾಮ ತಾಲ್ಲೂಕಿನ ತೋಪಲಕಟ್ಟಿ ಗ್ರಾಮದಲ್ಲಿ ತಾವರಗೇರಾದ ಸರ್ಕಾರಿ ಪದವಿ ಕಾಲೇಜಿನ ವತಿಯಿಂದ ವಾರ್ಷಿಕ ಸೇವಾ ಯೋಜನೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಗುರುವಾರ ಆರಂಭಗೊಂಡ ಶಿಬಿರದಲ್ಲಿ ಮಾತನಾಡಿದ ಪ್ರಾಂಶುಪಾಲೆ ಅರುಣಕುಮಾರಿ, ‘ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಒಳಗೊಂಡಿರುವ ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳಲ್ಲಿರುವ ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸುತ್ತದೆ. ನಾಯಕತ್ವ ಗುಣ ಬೆಳೆಸುತ್ತದೆ. ಸ್ವಚ್ಛತೆ, ಪರಿಸರ ನೈರ್ಮಲ್ಯ, ಶ್ರಮದಾನ ಮಹತ್ವ ಹಾಗೂ ಆರೋಗ್ಯ, ಶಿಕ್ಷಣ, ರಾಷ್ಟ್ರೀಯತೆ, ಸಾಂಸ್ಕೃತಿಕ ಪ್ರಜ್ಞೆ ಕುರಿತು ಸಮುದಾಯವನ್ನು ಜಾಗೃತಗೊಳಿಸುವುದಕ್ಕೆ ಒಂದು ಉತ್ತಮ ಅವಕಾಶ ದೊರೆಯುತ್ತದೆ’ ಎಂದರು. ಶಿಬಿರದಲ್ಲಿ ಒಂದು ವಾರದವರೆಗೂ ಉತ್ತಮ ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಉಪನ್ಯಾಸ, ವಿದ್ಯಾರ್ಥಿಗಳಿಂದ ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಗ್ರಾಮದ ಕನಕನಗೌಡ ಪೊಲೀಸಪಾಟೀಲ ಶಿಬಿರ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಮಹಾಂತಗೌಡ ಪಾಟೀಲ ಎನ್ನೆಸ್ಸೆಸ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮ ಅಧಿಕಾರಿ ಲವಕುಮಾರ ಶಿಬಿರದ ಉದ್ದೇಶ ಕುರಿತು ವಿವರಿಸಿದರು. ಉಮಾಕಾಂತ ಅವರಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು.
ಹನುಮವ್ವ ಮಾದರ, ಗುರನಗೌಡ ಪಾಟೀಲ, ನಾಗರಾಜ, ವೆಂಕಟೇಶ, ಉಮಾಕಾಂತ, ಮೆಹಬೂಬ್, ಮಹಾಂತೇಶ, ಸಂಗಪ್ಪ ಬಿಜಕಲ್ ಇತರರು ಇದ್ದರು. ಹುಲುಗಪ್ಪ ಸ್ವಾಗತಿಸಿದರು, ಬಸಯ್ಯ ಮಠಪತಿ ನಿರೂಪಿಸಿದರು. ರಘು ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಊರಿನ ಹಿರಿಯರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.