ADVERTISEMENT

ಬದುಕು ಬದಲಿಸಿದ ಅಂಜೂರ: ಕೈಹಿಡಿದ ಆನ್‌ಲೈನ್‌ ಮಾರುಕಟ್ಟೆ

ಡಂಬ್ರಳ್ಳಿ ರೈತನ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 7:41 IST
Last Updated 8 ಜೂನ್ 2021, 7:41 IST
ಅಳವಂಡಿ ಹೋಬಳಿಯ ಡಂಬ್ರಳ್ಳಿ ಗ್ರಾಮದ ರೈತ ಆನಂದರಡ್ಡಿ ಇಮ್ಮಡಿ ತಮ್ಮ ತೋಟದಲ್ಲಿ ಅಂಜೂರ ಬೆಳೆದಿರುವುದು
ಅಳವಂಡಿ ಹೋಬಳಿಯ ಡಂಬ್ರಳ್ಳಿ ಗ್ರಾಮದ ರೈತ ಆನಂದರಡ್ಡಿ ಇಮ್ಮಡಿ ತಮ್ಮ ತೋಟದಲ್ಲಿ ಅಂಜೂರ ಬೆಳೆದಿರುವುದು   

ಅಳವಂಡಿ: ಸಮೀಪದ ಡಂಬ್ರಳ್ಳಿ ಗ್ರಾಮದ ರೈತ ಆನಂದರಡ್ಡಿ ಲಾಕ್‌ಡೌನ್‌ ಕಾರಣ ತಮ್ಮ ಜಮೀನಿನಲ್ಲಿ ಬೆಳೆದ ಅಂಜೂರ ಹಣ್ಣನ್ನು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಎರಡು ವರ್ಷಗಳ ಹಿಂದೆಗ್ರಾಮದ ಹೊರವಲಯದ ತಮ್ಮ 2.5 ಎಕರೆ ಜಮೀನಿನಲ್ಲಿ ₹15 ರಂತೆ 800 ಅಂಜೂರ ಹಣ್ಣಿನ ಗಿಡ ನಾಟಿ ಮಾಡಿದ್ದರು. ಕೊಟ್ಟಿಗೆ ಗೊಬ್ಬರ, ಉಳುಮೆ, ಗುಂಡಿ ತೆಗೆಯುವುದು ಸೇರಿ ₹1.70 ಲಕ್ಷ ಖರ್ಚು ಮಾಡಿದ್ದರು.

ಮೊದಲನೇ ವರ್ಷ ಇಳುವರಿ ಕಡಿಮೆಯಾದರೂ ಕೆ.ಜಿಗೆ ₹30ರ ದರದಲ್ಲಿ ಮಾರಾಟ ಮಾಡಿದ್ದರಿಂದ ಅಂದಾಜು ₹1 ಲಕ್ಷ ಗಳಿಸಿದ್ದಾರೆ. ನಂತರದ ವರ್ಷದಲ್ಲಿ ಗೊಬ್ಬರ ಖರ್ಚು ಹೊರತುಪಡಿಸಿ, ಇತರೆ ಖರ್ಚು ಕಡಿಮೆಯಾಗಿದೆ. 2ನೇ ವರ್ಷ ಕೆಜಿಗೆ ₹40 ಸಿಕ್ಕಿದ್ದರಿಂದ ಲಾಭದತ್ತ ಮುಖಮಾಡಿದ್ದಾರೆ.

ADVERTISEMENT

ಮೂರನೇ ಇಳುವರಿ ಬರುವ ಸಂದರ್ಭದಲ್ಲಿಯೇ ಲಾಕ್‌ಡೌನ್‌ ಜಾರಿಯಾದ್ದರಿಂದ ಹಾನಿ ಆಗುವ ಆತಂಕ ಕಾಡಿತ್ತು. ಆದರೆ ಆನ್‌ಲೈನ್‌ ಮೂಲಕ ಅಂಜೂರಕ್ಕೆ ಬೇಡಿಕೆ ಬಂದಿದ್ದರಿಂದ ಕೆಜಿಗೆ ₹60ರಂತೆ ಮಾರಾಟ ಮಾಡಿದ್ದಾರೆ. ಅಲ್ಲದೆ ಗ್ರಾಮದ ಸುತ್ತಮುತ್ತಲಿನ ಗ್ರಾಹಕರ ಬೇಡಿಕೆಗಳನ್ನು ಆಧರಿಸಿ ಮೊಬೈಲ್ಮೂಲಕ ಸಂಪರ್ಕಿಸಿ ಮನೆ, ಮನೆಗೆ ₹30 ಕ್ಕೆ ಕೆಜಿಯಂತೆ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ.

ಕಳೆದ ಎರಡುವರ್ಷಗಳಿಂದ ದೇಶದಾದ್ಯಂತಕೊರೊನಾ ಹಾವಳಿ ಹೆಚ್ಚಿದೆ. ಮೇಲಿಂದ ಮೇಲೆ ಲಾಕ್‌ಡೌನ್‌ ಆಗುತ್ತಿರುವುದರಿಂದ ಹೆಚ್ಚಿನ ಲಾಭ ಗಳಿಸುವ ಅವಕಾಶ ಕೈತಪ್ಪಿ ಹೋಗಿದೆ.

ಆನ್‌ಲೈನ್‌ ಮಾರುಕಟ್ಟೆ ಹೇಗೆ: ಅವಶ್ಯಕತೆ ಇರುವ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆಗೆ ಅನುಸಾರವಾಗಿ ವೈಯಕ್ತಿಕವಾಗಿ ತಲುಪಿಸುವುದು, ತೋಟಗಾರಿಕೆ ಇಲಾಖೆಯ ರೈತ ಸಂತೆ, ಹಣ್ಣಿನ ಆನ್‌ಲೈನ್‌ ಮಾರುಕಟ್ಟೆ, ವಿವಿಧ ಔಷಧಕ್ಕೆ ಸರಬರಾಜು ಮಾಡುವ ಕಂಪನಿಗಳನ್ನು ಸಂಪರ್ಕಿಸಿ ಮಾರಾಟ ಮಾಡುವುದು.

ಹಣ್ಣಿನ ಬೆಳೆ, ವಿಶೇಷತೆ ಕುರಿತು ಮೊದಲೇ ಮಾಹಿತಿ ಹಂಚಿಕೊಂಡು ಮುಂಗಡ ಹಣ ಪಾವತಿಸಿದರೆ ಅವರಿಗೆ ನೇರವಾಗಿ ಅಂಜೂರಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಆನಂದ ರಡ್ಡಿ ಗ್ರಾಮದ ಪ್ರಗತಿಪರ ಕೃಷಿಕರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಹಲವಾರು ಪ್ರಯೋಗಗಳ ಮೂಲಕ ರೈತ ವಲಯದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದು ಜನರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.